ಯುಗಾದಿ, ರಂಜಾನ್ ಯಾವುದಕ್ಕೂ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆಯಿಲ್ಲ: ಸುಧಾಕರ್
ಬೆಂಗಳೂರು: ಯುಗಾದಿ ಹಬ್ಬವಾಗಲಿ, ರಂಜಾನ್ ಆಗಲಿ ಯಾವುದಕ್ಕೂ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆಯಿಲ್ಲ,ಯಾವುದೇ ವಿನಾಯಿತಿಯೂ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕಳೆದ ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 5 ಸಾವಿರ ಸೇರಿದಂತೆ ರಾಜ್ಯದಲ್ಲಿ ಒಟ್ಟು 7 ಸಾವಿರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ಆಯುಕ್ತರು, ನಗರಾಡಳಿತ ತಜ್ಞರ ಜೊತೆ ಸಭೆ ಮಾಡುತ್ತೇನೆ. ಬಿಬಿಎಂಪಿ ಯಿಂದ ಕೋವಿಡ್ ಗಾಗಿ ಎಂಟು ವಲಯಗಳನ್ನು ರಚನೆ ಮಾಡಿದ್ದು, ಕ್ಯಾಬಿನೆಟ್ ಮಂತ್ರಿ ನೇಮಿಸಿ ಎಲ್ಲರನ್ನೊಳಗೊಂಡ ನಿಯೋಗ ಮಾಡಿದ್ದಾರೆ. ಸೋಂಕು ನಿಯಂತ್ರಣಕ್ಕೆ ಆಡಳಿತಾತ್ಮಕವಾಗಿ ಯಾವ ಕ್ರಮಕೈಗೊಳ್ಳಬೇಕು ಅದೆಲ್ಲವನ್ನು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದು, ಸಭೆ ವೇಳೆ ಎಲ್ಲಾ ರಾಜ್ಯಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ನಿನ್ನೆ 50 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಲಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಕೊರೋನಾ ಏರುತ್ತಲೇ ಇದೆ. ಈ ಜಿಲ್ಲೆಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಿನ್ನೆ ಒಂದೇ 7,000 ಹೊಸ ಕೇಸ್ ಪತ್ತೆಯಾಗಿದ್ದು, ಬೆಂಗಳೂರು ನಗರ ಒಂದರಲ್ಲೇ 4991 ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಿಸಲು ಮುಖ್ಯಮಂತ್ರಿಗಳು 8 ವಲಯಗಳನ್ನು ರಚಿಸಲಾಗಿದ್ದು, ಸಚಿವರಿಗೆ ಸೋಂಕು ನಿಯಂತ್ರಿಸುವ ಹೊಣೆಯನ್ನೂ ನೀಡಲಾಗಿದೆ. ಯಾವುದೇ ಹಬ್ಬಕ್ಕೂ ರಿಯಾಯಿತಿ ನೀಡುವುದಿಲ್ಲ. ಪ್ರತೀಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.