ಮಠ-ಮಂದಿರಗಳಿಗೆ, ನಿಗಮಗಳಿಗೆ ನೀಡಲು ಸರಕಾರದ ಬಳಿ ಹಣವಿದೆ- ಸಾರಿಗೆ ನೌಕರರಿಗೆ ನೀಡಲು ಹಣವಿಲ್ಲವೇ: ಕೋಡಿಹಳ್ಳಿ

ತುಮಕೂರು: ಮಠ-ಮಂದಿರಗಳಿಗೆ, ಅಭಿವೃದ್ಧಿ ನಿಗಮಗಳಿಗೆ ನೀಡಲು ಸರಕಾರದ ಬಳಿ ಹಣವಿದೆ ಹಾಗೂ ಸಾರಿಗೆ ನೌಕರರಿಗೆ ನೀಡಲು ಹಣವಿಲ್ಲವೇ ಎಂದು ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಸಾರಿಗೆ ನೌಕರರ ಮುಷ್ಕರ ಕುರಿತಂತೆ  ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅನ್ಯಾಯ ಪ್ರಶ್ನಿಸಿದ್ದಕ್ಕೆ ಎಸ್ಮಾ ಜಾರಿ ಮಾಡುವುದು ಸರಿಯೇ..? ಎಸ್ಮಾ ಜಾರಿ ಮಾಡಲು ಸಾರಿಗೆ ನೌಕರರು ಯಾವ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬುದನ್ನು ಸರ್ಕಾರ ತಿಳಿಸಲಿ ಎಂದು ಪ್ರಶ್ನಿಸಿದ್ದಾರೆ.

 6ನೇ ವೇತನ ಆಯೋಗ ಜಾರಿಮಾಡುವಂತೆ ಮೊದಲಿನಿಂದಲೂ ಬೇಡಿಕೆ ಇಟ್ಟಿದ್ದೇವೆ. ಆದರೆ ಸರ್ಕಾರ ಆರ್ಥಿಕ ಸಂಕಷ್ಟದ ನೆಪ ಹೇಳಿ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ. ಈಗ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಬೆದರಿಕೆ ಹಾಕಲಾಗುತ್ತಿದೆ. ಈ ರೀತಿ ಹೆದರಿಸಿ ಕಾರ್ಮಿಕರನ್ನು ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ಳುವುದು ನ್ಯಾಯವೇ. ಮಠಗಳಿಗೆ, ನಿಗಮಗಳನ್ನು ರಚನೆ ಮಾಡಲು, ಅಭಿವೃದ್ಧಿ ಮಂಡಳಿಗಳಿಗೆ ನೀಡಲು ಸರ್ಕಾರದ ಬಳಿ ಹಣವಿದೆ. ಆದರೆ ಬಡ ನೌಕರರಿಗೆ ನಿಡಲು ಹಣವಿಲ್ಲ. ಸಾರಿಗೆ ನೌಕರರ ಬೇಡಿಕೆ ಈಡೆರಿಸಲು 700 ಕೋಟಿ ರೂಪಾಯಿ ಬೇಕಾಗುತ್ತದೆ. ಇದರಿಂದ ಸರಕಾರಕ್ಕೆ 700 ಕೋಟಿ ನಷ್ಟವಾಗುತ್ತದೆ ಎಂದು ಮಾತುಕತೆಗೆ ಹೋದಾಗ ಸರ್ಕಾರ ಹೇಳಿದೆ.

ಒಂದುವರೆ ಲಕ್ಷ ಬಡ ಕಾರ್ಮಿಕರಿಗೆ ಇಷ್ಟು ಹಣ ನೀಡಿದರೆ ಅದು ನಷ್ಟ ಹೇಗೆ ಆಗುತ್ತದೆ. ನಿಮಗೆ ಬೇಕಾದ ಮಠಗಳಿಗೆ, ಜಾತಿ ಧರ್ಮಗಳಿಗೆ, ನಿಗಮ ಮಂಡಳಿ, ಅಭಿವೃದ್ಧಿ ಮಂಡಳಿಗೆ 500 ಕೊಟಿಗಳಿಗೂ ಹೆಚ್ಚು ಹಣಗಳನ್ನು ಬಿಡುಗಡೆ ಮಾಡುತ್ತಿದ್ದೀರಿ ಅದು ನಿಮಗೆ ನಷ್ಟವೆನಿಸುತ್ತಿಲ್ಲ. ಆದರೆ ದುಡಿಯುವ ಕೈಗಳಿಗೆ, ಸಾರಿಗೆ ನೌಕರರಿಗೆ ಈ ಹಣ ನೀಡಲು ಆಗುವುದಿಲ್ಲ ಎಂದರೆ ಅನ್ಯಾಯವಲ್ಲದೇ ಮತ್ತಿನ್ನೇನು ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!