ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣ: ರೂ.40 ಲಕ್ಷ ವಿಮಾ ಪರಿಹಾರ ಮಂಜೂರು
ಉಡುಪಿ: ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣದಲ್ಲಿ ರೂ.40 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಮಂಜೂರು ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ನ್ಯಾಷನಲ್ ಇನ್ಶ್ಯೂರೆನ್ಸ್‌ನ ಹಿರಿಯ ವಿಭಾಗೀಯ ಪ್ರಬಂಧಕರಾದ ಪ್ರತಿಭಾ ಶೆಟ್ಟಿಯವರನ್ನು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಪ್ರತಿಭಾ ಶೆಟ್ಟಿಯವರು ವಿಮಾ ಪರಿಹಾರ ಮಂಜೂರಾತಿ ಪ್ರಕ್ರಿಯೆಯಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ಹಾಗೂ ಮೀನುಗಾರರ ಸಂಘದ ಪೂರಕ ಸಹಕಾರದಿಂದ ಈ ಗರಿಷ್ಠ ಮೊತ್ತ ಪರಿಹಾರ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶ್‌ಪಾಲ್ ಸುವರ್ಣ, ಸುವರ್ಣ ತ್ರಿಭುಜ ಬೋಟ್ ವಿಮಾ ಪರಿಹಾರ ಮಂಜೂರಾತಿಯಿಂದ ಬ್ಯಾಂಕ್ ಒದಗಿಸಿದ್ದ ಬೋಟಿನ ಸಾಲ ಮರುಪಾವತಿಗೆ ಅನುಕೂಲವಾಯಿತು. ವಿಮಾ ಪರಿಹಾರ ಮಂಜೂರಾತಿಗೆ ಎದುರಾದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸಿದ ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ರಾಜನಾಥ ಸಿಂಗ್, ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಮಲ್ಪೆ ಮೀನುಗಾರರ ಸಂಘ ಹಾಗೂ ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪೆನಿಯ ಸಿಬ್ಬಂದಿಗಳಿಗೆ ಬ್ಯಾಂಕಿನ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಪ್ರಧಾನ ಕಾರ್ಯದರ್ಶಿ ಸುಭಾಸ್ ಮೆಂಡನ್, ಯಾಂತ್ರಿಕ ಟ್ರಾಲ್ ಬೋಟ್ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಸುವರ್ಣ, ಆಳ ಸಮುದ್ರ ಬೋಟ್ ತಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪೆನಿಯ ಅಧಿಕಾರಿ ನರಸಿಂಹ ಪೈ, ವಿಮಾ ಪ್ರತಿನಿಧಿಗಳಾದ ವಸಂತ್ ಎನ್. ಕೋಟ್ಯಾನ್, ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.