ಉಡುಪಿ: ಶಾಪಿಂಗ್ ಮಾಲ್, ಬಟ್ಟೆಮಳಿಗೆ, ಹೋಟೇಲ್ ಸಿಬ್ಬಂದಿಗಳಿಗೆ ಕೋವಿಡ್ ತಪಾಸಣೆ ಕಡ್ಡಾಯ- ಜಿಲ್ಲಾಧಿಕಾರಿ

ಉಡುಪಿ ಏ.5: ಇತ್ತೀಚಿನ ದಿನಗಳಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ದೃಢಪಟ್ಟ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗುಂಪು ಗುಂಪಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೋವಿಡ್ ನ ಎರಡನೇ ಅಲೆಯು ಕಂಡುಬರುವ ಆತಂಕ ಎದುರಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಚಟುವಟಿಕೆಗಳನ್ನು ತೀವ್ರಗೊಳಿಸಬೇಕಾಗಿರುತ್ತದೆ.

ಈ ಹಿನ್ನಲೆಯಲ್ಲಿ ಉಲ್ಲೇಖಿತ ಸರಕಾರಿ ಆದೇಶಗಳಂತೆ ಸಮುದಾಯದಲ್ಲಿ ಸರ್ವೇಕ್ಷಣಾ ಕಾರ್ಯವನ್ನು ಚುರುಕು ಗೊಳಿಸಬೇಕಾಗಿದ್ದು, ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕಾಗಿರುತ್ತದೆ. ಅದರಂತೆ ಈ ನಿಟ್ಟಿನಲ್ಲಿ ಸಮುದಾಯದ ಕೆಲವು ನಿರ್ದಿಷ್ಟ ವರ್ಗಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ಯಾದೃಚ್ಛಿಕವಾಗಿ (Random) ತಪಾಸಣೆಗೆ ಒಳಪಡಿಸಿ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಬೇಕಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ((Disastet Management Act -2005) ಹಾಗೂ COVID ರೆಗ್ಯೂಲೇಶನ್ 2020 ಅಧಿಸೂಚನೆಯನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ ಈ ಕೆಳಕಂಡoತೆ ಆದೇಶಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲಾ ಮಾಲ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಬಟ್ಟೆ ಮಳಿಗೆಗಳು, ಎಲೆಕ್ಟ್ರಾನಿಕ್ ಉಪಕರಣಗಳ
ಸ್ಟೋರ್ ಗಳು, ಅಂಗಡಿ ಮುಂಗಟ್ಟುಗಳು , Zomato, Swiggy ಯಂತಹ ಎಲ್ಲಾ ಆಹಾರ ವಿತರಕ ಸಂಸ್ಥೆಗಳು, ಹೋಟೇಲ್
ಮತ್ತು ರೆಸ್ಟೋರೆಂಟ್ ಗಳವರು, ಸಿನಿಮಾ ಮಂದಿರದವರು ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿ
(ಉಡುಪಿ:0820 2526428, ಕುಂದಾಪುರ 08254-230730, ಕಾರ್ಕಳ 08258-231788) ಯವರನ್ನು ಸಂಪರ್ಕಿಸಿ
ದಿನಾಂಕವನ್ನು ನಿಗದಿಪಡಿಸಿಕೊಂಡು ತಮ್ಮ ಸಂಸ್ಥೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಯವರಿಗೆ ಕಡ್ಡಾಯವಾಗಿ ಕೋವಿಡ್-19
ತಪಾಸಣೆ ಮಾಡಿಸುವುದು.

ತಮ್ಮ ಸಂಸ್ಧೆಗಳ ಪ್ರವೇಶ ದ್ವಾರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಗಳನ್ನು ಇರಿಸತಕ್ಕದ್ದು, ಪ್ರವೇಶಿಸುವ ಮೊದಲು ಸ್ಯಾನಿಟೈಸರನ್ನು ಉಪಯೋಗಿಸತಕ್ಕದ್ದು, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಅಥವಾ ಆಗಾಗ್ಗೆ ಸಾಬೂನಿನಿಂದ ಕೈತೊಳೆದು ಕೊಳ್ಳುವುದು ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಹಾಗೂ ಕೋವಿಡ್-19 ನಿಯಂತ್ರಣಕ್ಕೆ ಸಂಬoಧಿಸಿದoತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಮಾರ್ಗಸೂಚಿ/ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ಇದಕ್ಕೆ ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 (Disastet Management Act -2005) ಯನ್ವಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂಬoಧಿಸಿದ ಸಂಸ್ದೆಗಳ ಪರವಾನಿಗೆಯನ್ನು ಕೋವಿಡ್-19 ಮುಕ್ತಾಯವಾಗುವ ತನಕ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!