ಗೆಲುವಿನ ಹೆಜ್ಜೆ ಪುಸ್ತಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಜಿಲ್ಲಾಧಿಕಾರಿ
ಉಡುಪಿ ಏ.05: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ತರಗತಿಗಳು ಕೋವಿಡ್ ಕಾರಣದಿಂದಾಗಿ 7 ತಿಂಗಳು ವಿಳಂಬವಾಗಿ ಆರಂಭವಾಗಿದೆ. ಆದ್ದರಿಂದ ಎಲ್ಲಾ ವಿಷಯಗಳಿಗೆ ಸರಳ ಅಧ್ಯಯನ ಕ್ರಮವನ್ನು ಅನುಸರಿಸಿ ನಿಧಾನಗತಿ ವಿದ್ಯಾರ್ಥಿಗಳು ಓದಿ ಕಲಿತು ಪರೀಕ್ಷೆ ಪಾಸಾಗಲು ಯೋಗ್ಯವಾಗಿರುವ 280 ಪುಟಗಳ ಗೆಲುವಿನ ಹೆಜ್ಜೆ ಪುಸ್ತಕ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಗೆಲುವಿನ ಹೆಜ್ಜೆ
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಪುಸ್ತಕ ಮುದ್ರಣಕ್ಕೆ ಅನುದಾನ ನೀಡಿ ಸಹಕರಿಸಿದ ಉದ್ಯಮಿ ನಾಡೋಜ ಜಿ.ಶಂಕರ್ ಅವರು 3000 ಪ್ರತಿಗಳನ್ನು ಮುದ್ರಿಸಿ, ಮಕ್ಕಳ ಕಲಿಕೆಗಾಗಿ ನೀಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಎಸ್.ಎಸ್.ಎಲ್.ಸಿಯಲ್ಲಿ ನಿಧಾನಗತಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆ ಪುಸ್ತಕ ನೀಡಲಾಗುತ್ತದೆ. ಈ
ಪುಸ್ತಕದ ಉದ್ದೇಶ ಕಲಿಯಲು ಹಿಂದಿರುವ ವಿದ್ಯಾರ್ಥಿಗಳಿಗೆ ಮುಂದೆ ತರುವಂತಹ ಪ್ರಯತ್ನ ಹಾಗೂ ಉತ್ತೀರ್ಣರಾಗುವ
ಉದ್ದೇಶದಿಂದ ಈ ಪುಸ್ತಕ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಶಿಕ್ಷಕರು ಈ ಪುಸ್ತಕವನ್ನು ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಬಳಕೆ ಮಾಡಬೇಕು. ಪಿ.ಯು.ಸಿ ವಿದ್ಯಾರ್ಥಿಗಳಿಗೂ ಇದೇ ರೀತಿಯಾದ
ಪುಸ್ತಕ ಹೊರತರುವಂತಹ ಪ್ರಯತ್ನ ಮಾಡಿದ್ದು, ಪುಸ್ತಕ ಮುದ್ರಣ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಗೊಳಿಸಲಾಗುತ್ತದೆ ಎಂದರು. ಉಡುಪಿಯ ಉದ್ಯಮಿ ಹಾಗೂ ನಾಡೋಜ ಡಾ.ಜಿ.ಶಂಕರ್ ಮಾತನಾಡಿ, ಬಡವರ ಮಕ್ಕಳಿಗೆ ಈ ಗೆಲುವಿನ ಹೆಜ್ಜೆ ಪುಸ್ತಕ ಪ್ರೇರಣೆಯಾಗಲಿ, ಅಲ್ಲದೇ ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ. ಈ ಪುಸ್ತಕ ಮುಂದಿನ ಭವಿಷ್ಯದ ಮಕ್ಕಳಿಗೆ ಪ್ರೇರಣೆಯಾಗಲಿವೆ ಎಂದರು. ಉದ್ಯಮಿ ನಾಡೋಜ ಜಿ.ಶಂಕರ್ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಡಿಪಿಐ ಎನ್.ಎಚ್.ನಾಗೂರ, ವೇದಮೂರ್ತಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಎಸ್.ಎಸ್ ಎಲ್.ಸಿ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆ ಪುಸ್ತಕ ವಿತರಿಸಲಾಯಿತು.