ಸರ್ಕಾರ ಬೇಕಾಬಿಟ್ಟಿ ಮಾರ್ಗಸೂಚಿ ಜಾರಿಗೊಳಿಸಿದರೆ ಹೋರಾಟ: ಕಾಂಗ್ರೆಸ್
ಬೆಂಗಳೂರು: ಕೊರೋನಾ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ ಬೇಕಾಬಿಟ್ಟಿ ಮಾರ್ಗಸೂಚಿ ಜಾರಿಗೊಳಿಸಿದರೆ ಹೋರಾಟ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗಬೇಕು. ಅದನ್ನು ಬಿಟ್ಟು ತಮಗೆ ಬೇಕಾದಾಗ ಮಾರ್ಗಸೂಚಿ ಬಿಡುಗಡೆ ಮಾಡಿ ಬೇಡವಾದಾಗ ಅದನ್ನು ಸಡಿಲ ಮಾಡಬಾರದು. ಆ ರೀತಿ ಮಾಡಿದರೆ ನಾವು ರಾಜಕೀಯ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿ. ಅದು ಅವರಿಗೂ ಸೇರಿದಂತೆ ಎಲ್ಲರಿಗೂ ಅನ್ವಯವಾಗುವಂತೆ ಮಾಡಲಿ, ಅವರಿಗೆ ಬೇಕಾದವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿ ಮಾಡುವುದು ಬೇಡ. ಇದು ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ. ಜನರ ಸುರಕ್ಷತೆ ಹಾಗೂ ಒಳ್ಳೆಯದಕ್ಕಾಗಿ ಕಾನೂನು ಮಾಡಲಿ. ನಾವು ಬೇಡ ಎನ್ನುವುದಿಲ್ಲ. ಆದರೆ, ಆ ಕಾನೂನನ್ನು ಎಲ್ಲರೂ ಪಾಲಿಸಬೇಕು. ಅವರಿಗೆ ಬೇಕಾದಾಗ ಕಾನೂನು ಸಡಿಲ ಮಾಡುವುದು ಬೇಡವಾದಾಗ ಕಠಿಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.