| ಮಂಗಳೂರು: ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿರುವ ಘಟನೆಗೆ ಸಂಬಂಧಿಸಿ ನವಾಝ್ ಎಂಬಾತನ ಮಾತು ಕೇಳಿ ಈ ಕೃತ್ಯ ಎಸಗಿದೆವು ಎಂದು ಆರೋಪಿಗಳು ತಿಳಿಸಿದ್ದು, ಈ ವಿಚಾರ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿರುವ ಪ್ರಕರಣಕ್ಕೂ ನವಾಝ್ ಗೂ ಯಾವುದೇ ಸಂಬಂಧ ಇಲ್ಲ, ಅಲ್ಲದೆ ಆರೋಪಿಗಳಿಗೂ ನವಾಝ್ ಗೂ ಪರಿಚಯವೇ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಟುಂಬಸ್ಥರು, ಪೊಲೀಸರು ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹೇಳಿಕೆಯನ್ನು ಯಾವುದೇ ಪೂರ್ವಾಪರ ವಿಚಾರಿಸದೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನವಾಝ್ ಕೆಲಸದ ನಿಮಿತ್ತ ವಿದೇಶಕ್ಕೆ 2 ಬಾರಿ ಹೋಗಿದ್ದ. ಆತನಿಗೆ ಎಚ್ ಐವಿ ಸೋಂಕು ತಗಲಿತ್ತು. ಹೀಗಾಗಿ ಆತ ಕಳೆದ ಒಂದೂವರೆ ವರ್ಷಗಳಿಂದ ಮನೆಯಲ್ಲಿಯೇ ಇದ್ದ. ಈ ಬಗ್ಗೆ ನಮ್ಮಲ್ಲಿ ವೈದ್ಯಕೀಯ ದಾಖಲೆ ಇವೆ. ಅಲ್ಲದೆ 2 ಬಾರಿ ವಿದೇಶಕ್ಕೆ ಹೋದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಎಲ್ಲಿಗೂ ಹೋಗುತ್ತಿರಲಿಲ್ಲ. ಇದೀಗ ನವಾಝ್ ಮೃತಪಟ್ಟು 40 ದಿನಗಳಾಗಿವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತು ಮುಂದುವರೆಸಿದ ಅವರು ಬಂಧಿತ ಆರೋಪಿಗಳು ಪೊರ್ಕೊಡಿಯವರು. ನವಾಝ್ ನ ಮನೆಯಿರುವುದು ಜೋಕಟ್ಟೆಯಲ್ಲಿ ಇವರ ಮನೆಗಳ ಮಧ್ಯೆ ಸುಮಾರು 4-5 ಕೀ.ಮೀ. ಅಂತರವಿದೆ.
ನಮ್ಮ ಮನೆಗೆ ಪೊಲೀಸರು ಬಂದು ಈ ಬಗ್ಗೆ ವಿಚಾರಿಸಿಯೇ ಇಲ್ಲ. ನವಾಝ್ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರ ಗೊಳಿಸಿದ್ದಾನೆ ಎಂದು ಕಮಿಷನರ್ ಸುಳ್ಳು ಆರೋಪ ಮಾಡಿದ್ದಾರೆ. ಆರೋಪಿಗಳು ನವಾಝ್ ನ ಹೆಸರು ಹೇಳಿದ ತಕ್ಷಣವೇ ತನಿಖೆ ಕೂಡ ಮಾಡದೇ ನೇರವಾಗಿ ಅವರು ನವಾಝ್ ನ ಹೆಸರು ಹೇಳಿದ್ದಾರೆ ಎಂದು ನವಾಝ್ ನ ತಾಯಿ, ಅಕ್ಕ ಹಾಗೂ ಸ್ಥಳೀಯರು ಹೇಳುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ದೈವಸ್ಥಾನದಲ್ಲಿ ತಪ್ಪುಕಾಣಿಕೆ ಸಲ್ಲಿಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡುವ ವೇಳೆ ಮಂಗಳೂರು ಕಮಿಷನರ್, ಪ್ರಮುಖ ಆರೋಪಿ ನವಾಝ್ ಎಂಬಾತನ ಮಾತು ಕೇಳಿ ಕೃತ್ಯ ಎಸಗಿದ್ದಾರೆ. ಇದೀಗ ನವಾಝ್ ಮೃತಪಟ್ಟ ಹಿನ್ನೆಲೆ ಜೀವ ಬೆದರಿಕೆಯಿಂದ ತಪ್ಪು ಕಾಣಿಕೆ ಸಲ್ಲಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ತಿಳಿಸಿದ್ದರು. ಈ ನಡುವೆ ಈ ವಿಚಾರಕ್ಕೆ ಸಂಬಂಧಿಸಿ ನವಾಝ್ ನನ್ನು ಕೊರಗಜ್ಜನೇ ಮಾರಕರೋಗ ಭರಿಸಿ ಕೊಂದಿದ್ದಾರೆ ಎಂದು ವ್ಯಾಪಕವಾಗಿ ಚರ್ಚೆಯಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ನವಾಝ್ ನ ಕುಟುಂಬಸ್ಥರು ಪ್ರಕರಣಕ್ಕೂ ನವಾಝ್ ಗೆ ಯಾವುದೇ ಸಂಬಂಧ ಇಲ್ಲ, ಅಲ್ಲದೆ ಆರೋಪಿಗಳಿಗೂ ನವಾಝ್ ಗೂ ಪರಿಚಯವೇ ಇರಲಿಲ್ಲ ಎಂದು ತಿಳಿಸಿದ್ದಾರೆ.
| |