ಅಸ್ಸಾಂ: ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ, ವಿಡಿಯೊ ವೈರಲ್- ಉದ್ವಿಗ್ನ ಪರಿಸ್ಥಿತಿ

ನವದೆಹಲಿ: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರಗಳಿದ್ದ (ಇವಿಎಂ) ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಸ್ಸಾಂನಲ್ಲಿ ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾಗಿ ಕೆಲವೇ ಗಂಟೆಗಳಲ್ಲಿ ಈ ಕಾರು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಅಸ್ಸಾಂ ಮೂಲದ ಪತ್ರಕರ್ತ ಅತಾನು ಭುಯಾನ್‌ ಇವಿಎಂಗಳಿರುವ ಕಾರಿನ ವಿಡಿಯೊ ಟ್ವೀಟಿಸಿದ್ದು, ‘ಈ ಘಟನೆಯ ಬಳಿಕ ಪಥರ್‌ಕಾಂಡಿ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ’ ಎಂದಿದ್ದಾರೆ.

ಇವಿಎಂಗಳಿದ್ದ ಕಾರು (ಬೊಲೆರೊ) ಬಿಜೆಪಿ ಅಭ್ಯರ್ಥಿ ಕೃಷ್ಣೆಂದು ಪೌಲ್‌ ಅವರಿಗೆ ಸೇರಿದ್ದು ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಬಿಜೆಪಿಯನ್ನು ಗುರಿಯಾಗಿಸಿ ಹೇಳಿಕೆಗಳನ್ನು ಪ್ರಕಟಿಸುತ್ತಿವೆ. ‘ಇಂಥ ದೂರುಗಳ ಬಗ್ಗೆ ಚುನಾವಣಾ ಆಯೋಗ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

‘ಇವಿಎಂಗಳ ಬಳಕೆಗೆ ಸಂಬಂಧಿಸಿದಂತೆ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತೆ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ’ ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.

‘ಪ್ರತಿ ಬಾರಿಯೂ ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳನ್ನು ಸಾಗಿಸುತ್ತಿರುವ ಖಾಸಗಿ ವಾಹನಗಳ ಕುರಿತು ವಿಡಿಯೊ ಲಭ್ಯವಾಗುತ್ತದೆ. ಅವುಗಳಲ್ಲಿ ಈ ಸಮಾನ ಅಂಶಗಳನ್ನು ಕಾಣಬಹುದಾಗಿರುತ್ತದೆ: 1. ಸೆರೆಹಿಡಿಯಲಾಗಿರುವ ವಿಡಿಯೊದಲ್ಲಿ ಕಾಣುವ ವಾಹನಗಳು ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿ ಅಥವಾ ಅವರ ಸಹಚರರದ್ದಾಗಿರುತ್ತವೆ. 2. ಇಂಥ ಘಟನೆಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ನಿರ್ಲಕ್ಷಿಸಲಾಗುತ್ತದೆ. 3. ಸೋಲಿನ ಭಯದಿಂದ ವಿಡಿಯೊ ಬಹಿರಂಗ ಪಡಿಸಿದ್ದಾರೆ ಎಂದು ಬಿಜೆಪಿ ತನ್ನ ಮಾಧ್ಯಮಗಳ ಮೂಲಕ ಆರೋಪಿಸುತ್ತದೆ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟಿಸಿದ್ದಾರೆ.

ಇಂಥ ಹಲವು ಘಟನೆಗಳು ವರದಿಯಾಗುತ್ತಿರುತ್ತವೆ, ಆದರೆ ಅವರ ಬಗ್ಗೆ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಈ ದೂರುಗಳ ಬಗ್ಗೆ ಚುನಾವಣಾ ಆಯೋಗ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದಿದ್ದಾರೆ.

ಅಸ್ಸಾಂನಲ್ಲಿ ಗುರುವಾರ 39 ವಿಧಾನಸಭೆ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಿತು. ನಿನ್ನೆ ಸಂಜೆ 6ರ ವರೆಗೂ ಒಟ್ಟು ಶೇ 73.03ರಷ್ಟು ಮತದಾನ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!