ರಾಜ್ಯಪಾಲರಿಗೆ ದೂರು: ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಕೆಂಡಮಂಡಲ, ಸಂಪುಟದಿಂದ ಕೈಬಿಡುವ ಎಚ್ಚರಿಕೆ
ಬೆಂಗಳೂರು: ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಕೆಂಡಮಂಡಲವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಗತ್ಯಬಿದ್ದರೆ ಸಚಿವ ಸ್ಥಾನದಿಂದ ಕೈಬಿಡುವುದಾಗಿ ಕೆ.ಎಸ್. ಈಶ್ವರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ನಡೆಯಿಂದ ಇನ್ನಷ್ಟು ಆಕ್ರೋಶಗೊಂಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ತಮ್ಮ ವಿರುದ್ದ ದೂರು ಆರೋಪ ಹಿನ್ನಲೆಯಲ್ಲಿ ತಾಜ್ ವೆಸ್ಟಂಡ್ ಹೋಟೇಲಿನಲ್ಲಿ ಮುಖ್ಯಮಂತ್ರಿ ಅವರು ಸಚಿವರ ಜತೆ ರಹಸ್ಯ ಸಭೆ ನಡೆಸಿದರು. ಭೋಜನ ಸವಿದರು. ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಭಾಗವಹಿಸಿದ್ದರು.
ಈ ಬೆಳವಣಿಗೆಯಿಂದ ಆಗಿರುವ ನಷ್ಟವನ್ನು ಸರಿಪಡಿಸುವ ಹಾಗೂ ಸಂಕಷ್ಟದಲ್ಲಿ ತಮ್ಮ ಪರ ನಿಲ್ಲುವಂತೆ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರ ಸಭೆ ಹಿನ್ನೆಲೆಯಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಿದ ಸಚಿವರು, ಶಾಸಕರು ಮುಖ್ಯಮಂತ್ರಿ ಪರ ಬೆಂಬಲಕ್ಕೆ ನಿಂತರು.
ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಈಶ್ವರಪ್ಪ ಅವರ ಖಾತೆ ಹಿಂಪಡೆಯುತ್ತೇನೆ. ಜಾಸ್ತಿ ಮಾತನಾಡಿದರೆ ಸಂಪುಟದಿಂದಲೇ ಕೈ ಬಿಡುತ್ತೇನೆ ಎಂದು ಯಡಿಯೂರಪ್ಪ ಕೂಗಾಡಿದ್ದಾರೆ.
ಈಶ್ವರಪ್ಪ ಅವರ ನಡೆಯಿಂದ ಪ್ರತಿಪಕ್ಷಗಳಿಗೆ ಆಹಾರ ಸಿಕ್ಕಂತಾಗಿದೆ. ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ.