ಸಿಡಿ ಕೇಸ್: ನೈತಿಕ ಹೊಣೆ ಹೊತ್ತು ಡಿಕೆಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು- ಲಖನ್ ಜಾರಕಿಹೊಳಿ ಆಗ್ರಹ

ಬೆಳಗಾವಿ: ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಕಾಂಗ್ರೆಸ್​ ಮುಖಂಡ ಲಖನ್ ಜಾರಕಿಹೊಳಿಯವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಮನೆಯವರೇ ನೇರವಾಗಿ ಡಿಕೆಶಿ ಪಾತ್ರದ ಬಗ್ಗೆ ಹೇಳುತ್ತಿದ್ದಾರೆ. ತಂದೆ ತಾಯಿ ಆರೋಪ ಮಾಡುತ್ತಿದ್ದಾರೆ ಅಂದ್ರೆ ಅದು ನಿಜಾನೆ ಇರಬಹುದು. ಹಾಗಾಗಿನೈತಿಕ ಹೊಣೆ ಹೊತ್ತು ಡಿ ಕೆ ಶಿವಕುಮಾರ್ ಸಹ ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಆರೋಪ ಕೇಳಿ ಬರುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.  ಈಗ ಸಂತ್ರಸ್ತ ಮಹಿಳೆಯ ಪೋಷಕರು ನೇರವಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪದ ಹಿನ್ನಲೆ ರಮೇಶ್ ಹೇಗೆ ರಾಜೀನಾಮೆ ನೀಡಿದರೋ ಡಿಕೆಶಿ ಕೂಡ ರಾಜೀನಾಮೆ ನೀಡಲಿ. ಈ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್ ಅವಲೋಕಿಸಬೇಕು. ಈಗಾಗಲೇ ರಾಜ್ಯದಲ್ಲಿ ಮೂರು ಕ್ಷೇತ್ರಗಳಾದ ಬಸವಕಲ್ಯಾಣ, ಮಸ್ಕಿ, ಹಾಗೂ ಬೆಳಗಾವಿಯಲ್ಲಿ ಉಪ ಚುನಾವಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ಸಿಡಿ ವಿಚಾರದಲ್ಲಿ ಡಿಕೆಶಿ ಹೆಸರೂ ಕೇಳಿ ಬಂದಿದೆ. ಸಿಡಿ ಸಂತ್ರಸ್ತೆಯ ಹಿಂದೆ ಡಿಕೆ ಶಿವಕುಮಾರ್ ಕುತಂತ್ರದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಕೂಡ ಪ್ರಸಾರವಾಗಿರುವ ಹಿನ್ನಲೆ ಇದು ಕಾಂಗ್ರೆಸ್​ ಮೇಲೆ ಪರಿಣಾಮ ಬೀರಲಿದೆ. ಹೈಕಮಾಂಡ್ ಈ ಕುರಿತು ಚಿಂತನೆ ನಡೆಸಿ ಕೂಡಲೇ ಕೆಪಿಸಿಸಿ  ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ‌ನೀಡಿಸಿದರೆ, ಚುನಾವಣೆಯಲ್ಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲವಾದರೆ ಇದು ಮೂರು ಕ್ಷೇತ್ರಗಳ ಉಪಚುನಾಣೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 

ಸಿಡಿ ಕೇಸ್ ಹಿಂದೆ ಯಾರಿದ್ದಾರೆ (ಡಿಕೆ.ಶಿವಕುಮಾರ್) ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿಗೆ. ಯಾರು ಪಿತೂರಿ ಮಾಡಿದ್ದಾರೆಂಬುದನ್ನೂ ತಿಳಿಸಿದ್ದಾರೆ. ಪ್ರಕರಣವನ್ನು ಎಲ್ಲಾ ರಾಜಕೀಯ ಪಕ್ಷಗಳೂ ಗಂಭೀರವಾಗಿ ಪರಿಗಣಿಸಬೇಕು. ಪಿತೂರಿ ಹಿಂದಿರುವ ಸತ್ಯವನ್ನು ಅರಿಯಬೇಕು. ಇಂತಹ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವ ನಾಯಕರೂ ಬಹಳ ಎಚ್ಚರದಿಂದ ಇರಬೇಕು ಎಂದಿದ್ದಾರೆ. 

ರಾಜ್ಯ ಜಲಸಂಪನ್ಮೂಲ ಸಚಿವರಾಗಿ ರಮೇಶ್ ಜಾರಕಿಹೊಳಿಯವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮದಿಂದಾಗಿ ಅಧಿಕಾರಕ್ಕೆ ಬಂದ ಕೇವಲ 6 ತಿಂಗಳುಗಳಲ್ಲಿ ಮಹದಾಯಿ ಯೋಜನೆ ಜಾರಿಗೆ ತಂದಿದ್ದರು. ಅವರ ವಿರುದ್ಧ ಇಂತಹ ಪಿತೂರಿ ನಡೆಸಿರುವುದು ದುರಾದೃಷ್ಟಕರ ವಿಚಾರ. ದುಶ್ಮನ್ ಕಹಾ ಹೈ ಅಂದ್ರೆ ಬಗಲ್‌ ಮೇ ಹೈ ಎಂಬಂತಾಗಿದೆ. ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂಬುದೇ ಇದೀಗ ಗೊಂದಲವಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!