ಕೊರಗಜ್ಜನ ದೈವಸ್ಥಾನದಲ್ಲಿ ವಿಕೃತಿ ಮೆರೆದ ಓರ್ವನ ಸಾವು, ಇಬ್ಬರು ಆರೋಪಿಗಳ ತಪ್ಪೊಪ್ಪಿಗೆ
ಮಂಗಳೂರು: ದಕ್ಷಿಣ ಕನ್ನಡದ ಕೊರಗಜ್ಜನ ದೈವ ಸ್ಥಾನದಲ್ಲಿ ವಿಕೃತಿ ಮೆರೆದ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಆರೋಪಿಗಳು “ನಾವು ನವಾಝ್ ಎಂಬವರ ಮಾತು ಕೇಳಿ ಹಲವು ಕೊರಗಜ್ಜನ ಕ್ಷೇತ್ರವನ್ನು ಮಾಲಿನ್ಯ ಮಾಡಿದ್ದೆವು. ದುಬೈಯಲ್ಲಿದ್ದ ನವಾಝ್ ಒಂದುವರೆ ವರ್ಷದ ಹಿಂದೆ ಊರಿಗೆ ಮರಳಿದ್ದ. ಕೊರಗಜ್ಜನ ಕ್ಷೇತ್ರ ಮಹಿಮೆ ಇಲ್ಲ, ಅದನ್ನು ಮಲಿನ ಮಾಡಿದರೆ ಏನೂ ಆಗುವುದಿಲ್ಲ ಎಂದಿದ್ದ. ಆತನ ಮಾತು ಕೇಳಿ ಕೊರಗಜ್ಜನ ಕ್ಷೇತ್ರ ಮಾಲಿನ್ಯ ಮಾಡಿದ್ದೆವು. ಬಳಿಕ ನವಾಝ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದ. ಹಾಗಾಗಿ ನಾವು ಕ್ಷೇತ್ರಕ್ಕೆ ಬಂದು ಕ್ಷಮೆ ಕೇಳುತ್ತಿದ್ದೇವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಹೀಂ ಮತ್ತು ತೌಫೀಕ್‍ರನ್ನು ವಿಚಾರಣೆಗೊಳಪಡಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೆಲವೆಡೆ ಕೊರಗಜ್ಜನ ಕ್ಷೇತ್ರ ಮಲಿನಗೊಳಿಸಿದ ಘಟನೆ ನಡೆದಿತ್ತು. ಆ ಬಳಿಕ ಹಿಂದುತ್ವವಾದಿ ಸಂಘಟನೆಗಳು ಕಾಲ್ನಡಿಗೆ ಜಾಥಾ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿತ್ತು. ಅಲ್ಲದೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವಂತೆ ದೈವಸ್ಥಾನದಲ್ಲಿ ಹರಕೆ ,ದೂರು ನೀಡಲಾಗಿತ್ತು. ಅದರಂತೆ ಪ್ರಕರಣದ ಓರ್ವ ಆರೋಪಿ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಇನ್ನಿಬ್ಬರು ಆರೋಪಿಗಳು ದೈವದ ಕೋಲ ನಡೆಯುತ್ತಿದ್ದ ಸಂದರ್ಭ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಒಪ್ಪಿಸಿದ್ದಾರೆ. ಅಲ್ಲದೆ ಇದೇ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.