ಐಪಿಎಲ್ ಟ್ವೆಂಟಿ-20: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್…
ಚೆನ್ನೈ: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ಹಂಚಿಕೊಂಡಿದೆ. ಅದೇನೆಂದರೆ ತಂಡದ ಸ್ಟಾರ್ ಆಟಗಾರ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್, ಚೆನ್ನೈನಲ್ಲಿ ಆರ್‌ಸಿಬಿ ಬಯೋಬಬಲ್ ಅನ್ನು ಸೇರಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್‌ಸಿಬಿ, ಆಕಾಶನೌಕೆ ಲ್ಯಾಂಡ್ ಆಗಿದ್ದು, ಎಬಿ ಡಿ ವಿಲಿಯರ್ಸ್ ಚೆನ್ನೈಯಲ್ಲಿ ಆರ್‌ಸಿಬಿ ಬಬಲ್‌ಗೆ ಸೇರ್ಪೆಡೆಯಾಗಿದ್ದಾರೆ ಎಂಬ ಮಾಹಿತಿಯನ್ನು ಬಿತ್ತರಿಸಿದೆ.
ಅಭಿಮಾನಿಗಳ ಹರ್ಷವನ್ನು ದ್ವಿಗುಣಗೊಳಿಸುವಂತೆ, ಗುರುವಾರದಂದೇ ನಾಯಕ ವಿರಾಟ್ ಕೊಹ್ಲಿ ಸಹ ಆರ್‌ಸಿಬಿ ಬಯೋಬಬಲ್ ಅನ್ನು ಸೇರಿಕೊಳ್ಳಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಬಬಲ್ ತೊರೆದಿರುವ ವಿರಾಟ್ ಕೊಹ್ಲಿ, ಇದೀಗ ಚೆನ್ನೈಗೆ ಆಗಮಿಸಲಿದ್ದು, ಐಪಿಎಲ್‌ನಲ್ಲಿ ಭಾಗವಹಿಸುವುದಕ್ಕಾಗಿ ಆರ್‌ಸಿಬಿ ಬಯೋಬಬಲ್ ಸೇರಿಕೊಳ್ಳಲಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಆಟಗಾರರು ಏಳು ದಿನಗಳ ಪ್ರತ್ಯೇಕ ವಾಸದಲ್ಲಿರುವುದು ಕಡ್ಡಾಯವಾಗಿದೆ. ಈ ಹಂತದಲ್ಲಿ ಆಟಗಾರರು ಕೊರೊನಾ ಪರೀಕ್ಷೆ ಒಳಪಡಬೇಕಾಗುತ್ತದೆ. ಕೋವಿಡ್ ಪರೀಕ್ಷೆ ನೆಗೆಟಿವ್ ಆದರೆ ಮಾತ್ರ ಹೋಟೆಲ್ ಕೊಠಡಿಯಿಂದ ಹೊರಗೆ ಬಂದು ಅಭ್ಯಾಸದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಏಪ್ರಿಲ್ 9ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.