ಕರಾವಳಿಯ ಇಬ್ಬರು ಯುವತಿಯರು ಭಾರತೀಯ ಸೇನೆಯ ಗಡಿಭದ್ರತಾ ಪಡೆಗೆ ಆಯ್ಕೆ
ದ.ಕ: ಕರಾವಳಿಯ ಇಬ್ಬರು ಯುವತಿಯರು ಭಾರತೀಯ ಸೇನೆಯ ಗಡಿಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ. ಪುತ್ತೂರು ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿಯ ಪುತ್ರಿಯಾಗಿರುವ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿಯವರ ಪುತ್ರಿ ಯೋಗಿತಾ ಎಂ. ಸೇನೆಗೆ ಆಯ್ಕೆಯಾಗಿದ್ದಾರೆ. ಸದ್ಯ ಇವರು ಏಪ್ರಿಲ್ 1ರಂದು ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪುರ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇಬ್ಬರೂ ಯುವತಿಯರು ದೇಶ ಸೇವೆಗೆ ಸಜ್ಜಾಗಿರುವುದು ಅವರ ಕುಟುಂಬಸ್ಥರು ಮತ್ತು ಊರಿಗೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದೆ.
ಈ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿನಂದನೆ ನಲ್ಲಿಸಿ ಟ್ವೀಟ್ ಮಾಡಿದ್ದು, ಹೆಣ್ಣು ಅಬಲೆಯಲ್ಲ, ಆಕೆಯ ಸಾಮಥ್ರ್ಯಕ್ಕೆ ತಕ್ಕ ಪ್ರೋತ್ಸಾಹ ಮತ್ತು ಅವಕಾಶ ದೊರೆತಾಗ ಅಸಾಧ್ಯ ಯಾವುದೂ ಇಲ್ಲ. ನಮ್ಮ ದಕ್ಷಿಣ ಕನ್ನಡದ ಪುತ್ತೂರಿನ ಹೆಮ್ಮೆಯ ಪ್ರತಿಭೆಗಳಾದ ಕಾಣಿಯೂರಿನ ಕುಮಾರಿ ಯೋಗಿತಾ ಹಾಗೂ ಬಲ್ನಾಡಿನ ಕುಮಾರಿ ರಮ್ಯಾ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದು, ಸ್ತ್ರೀಶಕ್ತಿಗೆ ನಿದರ್ಶನವಾಗಿದ್ದಾರೆ. ಸಾಧಕಿಯರಿಗೆ ಅಭಿನಂದನೆಗಳು ಎಂದು ಬರೆದುಕೊಳ್ಳುವ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ.