ದ.ಕ: ಧಾರ್ಮಿಕ ಆಚರಣೆ, ಸಭೆ ಸಮಾರಂಭ ನಡೆಸದಂತೆ ಸೆಕ್ಷನ್ 144 (3)ಜಾರಿ- ಜಿಲ್ಲಾಧಿಕಾರಿ
ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆ, ಸಭೆ ಸಮಾರಂಭ ನಡೆಸದಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ 2 ನೇ ಅಲೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿನಿಂದ ಸಾರ್ವಜನಿಕರನ್ನು ದೂರ ಇಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮಾರ್ಚ್ 29 ರಿಂದಲೇ 144 (3) ಸೆಕ್ಷನ್ ಜಾರಿಗೊಳಿಸಿದ್ದು, ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿಹಬ್ಬ, ಷಬ್-ಎ- ಬರತ್ , ಗುಡ್ ಫ್ರೈಡೇ ಇತ್ಯಾದಿ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನ, ಉದ್ಯಾನವನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳು ಇತ್ಯಾದಿ ಪ್ರದೇಶದಲ್ಲಿ ಸಾರ್ವಜನಿಕ ಸಮಾರಂಭಗಳನ್ನು ಸಭೆಗಳನ್ನು ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದಲ್ಲದೆ ಸಾರ್ವಜನಿಕರು ಹೆಚ್ಚಾಗಿ ಸೇರುವಂತಹ ಮೇಳ, ಜಾತ್ರೆ, ಸಮಾವೇಶ, ಸಮ್ಮೇಳನ, ಆಚರಣೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯಗಳಿವೆ. ಆದ್ದರಿಂದ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಚ್ 29 ರಿಂದ ಯಾವುದೇ ಧಾರ್ಮಿಕ ಆಚರಣೆ, ಸಭೆ ಸಮಾರಂಭಗಳನ್ನು ನಡೆಸದಂತೆ ತಿಳಿಸಲಾಗಿದೆ.