ಮಣಿಪಾಲ ವಿದ್ಯಾರ್ಥಿಗಳ ಪಾರ್ಟಿಯಿಂದಾಗಿ ಕೋವಿಡ್ ವ್ಯಾಪಕವಾಗಿ ಹರಡಿರುವ ಸಾಧ್ಯತೆ: ಸಚಿವ ಡಾ.ಸುಧಾಕರ್
ಉಡುಪಿ: ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಇಂದು ಮಣಿಪಾಲಕ್ಕೆ ಭೇಟಿ ನೀಡಿದ್ದು, ಎಂಐಟಿ ಕ್ಯಾಂಪಸ್ ನ ಕೋವಿಡ್ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಕ್ಯಾಂಪಸ್‍ನಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅದರಂತೆ ಕ್ಯಾಂಪಸ್‍ನ ಅಧಿಕಾರಿಗಳು ತೆಗೆದುಕೊಂಡಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಒಂದೇ ಸಂಸ್ಥೆಯಲ್ಲಿ 950 ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿದ್ದು, ದಿನೇದಿನೇ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ. ಸೋಂಕಿತರನ್ನು ಐಸೊಲೇಟ್ ಮಾಡೋದು ಬಹು ಮುಖ್ಯವಾಗಿದ್ದು, ಕ್ಯಾಂಪಸ್‍ನಲ್ಲಿರು ಸೋಂಕಿತರನ್ನು 14 ರಿಂದ 15 ದಿನಗಳ ಕಾಲ ಐಸೊಲೇಟ್ ಮಾಡಲಾಗುತ್ತಿದೆ. ವಾರ್ಷಿಕ ಪರೀಕ್ಷೆಗಳು ನಡೆದ ನಂತರ ಸೋಂಕಿತರ ವರದಿ ನೆಗೆಟಿವ್ ಬಂದ ಬಳಿಕ ಅವರನ್ನು ಮನೆಗೆ ಕಳುಹಿಸಿ ಕೊಡಲಾಗುತ್ತದೆ ಎಂದರು.
ಕ್ಯಾಂಪಸ್‍ನಲ್ಲಿ 11 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ. ವಿದ್ಯಾರ್ಥಿಗಳು ಕೋವಿಡ್ ನಿಯಮವನ್ನು ಪಾಲಿಸದೇ ಇರುವುದು, ನಂತರದ ದಿನಗಳಲ್ಲಿ ಪಾರ್ಟಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರಿಂದ ಕೋವಿಡ್ ಹರಡಿರುವ ಸಾಧ್ಯತೆಗಳಿವೆ. ಆದ್ದರಿಂದ ಈ ಎಲ್ಲದರ ಬಗ್ಗೆ ಗಮನ ಹರಿಸಲಾಗುತ್ತಿದ್ದು, ಅದರ ಬಗ್ಗೆ ಯಾವ ರೀತಿ ಕ್ರಮ ಕೈ ಗೊಳ್ಳಬೇಕು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಲ್ಲದೆ ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಊರಿಗೆ ಕಳುಹಿಸಿ ಕೊಡುವ ಕ್ರಮವನ್ನು ಆಡಳಿತ ಮಂಡಳಿ ನೋಡಿಕೊಳ್ಳುತ್ತಿದೆ ಎಂದರು.
ಕ್ಯಾಂಪಸ್‍ನಲ್ಲಿ ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಈಗಾಗಲೇ ಕ್ಯಾಂಪಸ್ ನಲ್ಲಿ 9000 ಕ್ಕೂ ಹೆಚ್ವು ಟೆಸ್ಟ್ ಮಾಡಲಾಗಿದೆ. ಸದ್ಯ ಸೋಂಕು ಪತ್ತೆಯಾಗಿರುವ ವಿದ್ಯಾರ್ಥಿಗಳಲ್ಲಿ ಯಾರಲ್ಲಿಯೂ ತೀವ್ರತೆ ಕಂಡು ಬಂದಿಲ್ಲ. ಕೆಲವರಲ್ಲಿ ಸೋಂಕು ಲಘುವಾಗಿ ಕಾನಿಸಿಕೊಂಡರೆ ಮತ್ತೆ ಕೆಲವರಲ್ಲಿ ಯಾವುದೇ ತರನಾದ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ ಎಂದರು.
ವಿದ್ಯಾರ್ಥಿಗಳು ಕೊರೋನಾ ಪಸರಿಸುವ ವಾಹಕ ಆಗುತ್ತಾರೆ ಆದ್ದರಿಂದ ಪೂರ್ಣ ಮಾಹೆ ವಿವಿಗೂ ಸೂಕ್ತ ಮುಂಜಾಗೃತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಸಾವಿನ ಪ್ರಮಾಣ ಹೆಚ್ಚಾಗುತ್ತಿಲ್ಲ ಹಾಗಾಗಿ ಸಾವಿನ ಪ್ರಮಾಣವನ್ನು ನಿಯಂತ್ರಿಸುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮೊದಲಾದ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಬೇಕು ಎಂದರು.