ಯಕ್ಷಗಾನ, ನಾಟಕ, ಸಿನೇಮಾಗಳ ಪ್ರದರ್ಶನ ರದ್ದುಪಡಿಸಿಲ್ಲ- ಮಾರ್ಗ ಸೂಚಿ ಅನುಸರಿಸಿ: ಜಿಲ್ಲಾಧಿಕಾರಿ

ಉಡುಪಿ(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೋವಿಡ್ ಪರಿಸ್ಥಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಿದೆ. ಅದರಂತೆ ಜಿಲ್ಲೆಯಲ್ಲಿಯೂ ಈ ನಿಯಮಗಳನ್ನು ಅನ್ವಯಿಸಲಾಗಿದ್ದು, ಹೊಸ ಮಾರ್ಗ ಸೂಚಿಯಲ್ಲಿ ಜಾತ್ರೆ ಉತ್ಸವಗಳ ಆಚರಣೆ ಕುರಿತಂತೆ ನಿರ್ದೇಶನಗಳನ್ನು ನೀಡಲಾಗಿದೆ.

ಈ ಬಗ್ಗೆ ಇಂದು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು,  ಈ ಹಿಂದೆ ಹಬ್ಬಗಳ ಆಚರಣೆಗೆ ಸಂಬಮದಿಸಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು. ಇದೀಗ ಹೊಸ ಮಾರ್ಗ ಸೂಚಿಯಲ್ಲಿ ಹಬ್ಬಗಳ ಜೊತೆಗೆ ಜಾತ್ರೆ , ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಜಿಲ್ಲೆಯಲ್ಲಿ ಯಾವುದೇ ಜಾತ್ರೆ ಅಥವಾ ಉತ್ಸವವನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಿ ಆಚರಣೆ ನಡೆಸಬೇಕು ಎಂದು ಆಯೋಜಕರಲ್ಲಿ ಮನವಿ ಮಾಡಿಕೊಂಡರು. ಯಕ್ಷಗಾನ, ನಾಟಕ, ಸಿನೇಮಾಗಳ ಪ್ರದರ್ಶನವನ್ನು ರದ್ದು ಪಡಿಸಿಲ್ಲ. ಅದರಂತೆ  ಸಮಾರಂಭಗಳಿಗೆ ಇರುವ ನಿಯಮ ಹಾಗೂ ಮಾರ್ಗ ಸೂಚಿಯನ್ನು ಅನುಸರಿಸಿಕೊಂಡು ಯಕ್ಷಗಾನ ,ನಾಟಕ, ಸಿನೇಮಗಳನ್ನು ಪ್ರದರ್ಶನ ಮಾಡಬಹುದು ಎಂದು ತಿಳಿಸಿದರು. ಆದರೆ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದ್ದಲ್ಲಿ ಕಾರ್ಯಕ್ರಮ ಆಯೋಜನೆಗೊಂಡ ಸ್ಥಳದ ಮಾಲಿಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಸರಕಾರದ ಆದೇಶದ ಪ್ರಕಾರ ಎಷ್ಟು ಜನ ಇರಬೇಕು ಎಂದು ಆದೇಶ ಇದೆಯೋ ಅಷ್ಟು ಜನ ಮಾತ್ರ ಭಾಗವಹಿಸಬೇಕು. ಒಂದು ವೇಳೆ ಇಂತಹ ಸಮಾರಂಭಗಳಲ್ಲಿ ಸರಕಾರದ ಆದೇಶಕ್ಕಿಂತ ಹೆಚ್ಚಿನ ಜನರು ಕಂಡು ಬಂದರೆ ಮದುವೆ ಚೌಟ್ರಿಗಳ ಮಾಲಿಕರ ಮೇಲೆ ಕ್ರಮ ಜರುಗಿಸುತ್ತೇವೆ. ಅಲ್ಲದೆ ಸಭೆ ಸಮಾರಮಭಗಳಿಗೆ ಸಂಬಂಧಿಸಿ ಈ ಸಮಾರಂಭಗಳನ್ನು ಆಯೋಜನೆ ಮಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದರೊಂದಿಗೆ ಜಿಲ್ಲೆಯ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಇತರ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಹತೋಟಿ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಎಂಐಟಿ ಕ್ಯಾಂಪಸ್ ನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿರುವುದರಿಂದ ಇಡೀ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ಇದೆ ಎಂಬಂತೆ ತೋರುತ್ತಿದೆ. ಎಂಐಟಿ ಕ್ಯಾಂಪಸ್ ನಲ್ಲಿ 15% ಕೊರೋನಾ ಇದ್ದರೆ, ಇತರ ಕಡೆಗಳಲ್ಲಿ ಕೇವಲ 2 ಶೇ. ಇದೆ. ಹಾಗಾಗಿ ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ, ಆದರೆ ಎಲ್ಲರೂ ಜಾಗರೂಕತೆ ವಹಿಸಬೇಕಾಗಿದ್ದು ಸಾರ್ವಜನಿಕರು ಎಚ್ಚರಿಕೆ ತಪ್ಪಿದ್ದಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿಂದೆ ಜನವರಿಯಲ್ಲಿ 0.5 ಶೇ. ಇದ್ದ ಕೋವಿಡ್ ಪ್ರಮಾಣ ಆ ಬಳಿಕ ಫೆ. 0.1 ಶೇ ಆಗಿತ್ತು.  ಸದ್ಯ ಜಿಲ್ಲೆಯಲ್ಲಿ 0.2 ಶೇ, ಆಗಿದ್ದು, ಜಿಲ್ಲೆಯಲ್ಲಿ ಕೊರೋನಾ ನಿಧಾನ ಗತಿಯಲ್ಲಿ ಹೆಚ್ಚಗುತ್ತಿದೆ. ಆದ್ದರಿಂದ ಸಾರ್ವಜನಿಕರು ಎಚ್ಚೆತ್ತುಕೊಂದು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಜಿಲ್ಲೆಯಲ್ಲಿ ಲಕ್‍ಡೌನ್ ನಂತಹ ಕ್ರಮಗಳ ಅಗತ್ಯ ವಿರುವುದಿಲ್ಲ ಎಂದು ಸಾರ್ವಜನಿಕರಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿಕೊಂಡರು.

ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನಲ್ಲಿ ಮಾರ್ಗ ಸೂಚಿಯನ್ನು ಪಾಲಿಸಬೇಕು. ಈಗಾಗಲೆ  ಜಿಲ್ಲೆಯ 4 ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದು ಶಿಕ್ಷಣ ಸಂಸ್ಥೆಯ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ ಆದ್ದರಿಂದ  ಸರಕಾರಿ, ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಡಿಡಿಪಿಐ ಮತ್ತು ಡಿಡಿಪಿಒ ಗಳಿಗೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜನೆ ಮಡಿ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಈ ವೇಳೆ ಯಾವುದೇ ಉಲ್ಲಂಘನೆ ಕಂಡು ಬಂದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಉಡುಪಿ ಉತ್ಸವ ಕುರಿತಂತೆ ಮಾಹಿತಿ ನೀಡಿರುವ ಅವರು, ಈ ಭಾರಿ ಉಡುಪಿ ಉತ್ಸವದಲ್ಲಿ ಯಾವುದೇ ರೀತಿ ಪ್ರದರ್ಶನ ಹಾಗೂ ಜಾತ್ರೆಗೆ ಅವಕಾಶ ನೀಡಿಲ್ಲ. ಅನುಮತಿ ಕುರಿತಾಗಿ ಬಂದ ಅರ್ಜಿಯನ್ನೂ ತಿರಸ್ಕರಿಸಿದ್ದೇವೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ಯಾವುದೇ ರೀತಿಯಲ್ಲೂ ಉಡುಪಿ ಉತ್ಸವ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ReplyForward

Leave a Reply

Your email address will not be published. Required fields are marked *

error: Content is protected !!