ಒಂದೇ ಸ್ಪರ್ಧೆಯಲ್ಲಿ 6 ಪದಕ ಪಡೆಯುವ ಮೂಲಕ ಹೊಸ ದಾಖಲೆ ಬರೆದ ಕಂಬಳ ವೀರ ಶ್ರೀನಿವಾಸ ಗೌಡ!
ದ.ಕ: ಕಂಬಳ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ. ಕಂಬಳ ಪ್ರಿಯರ ನೆಚ್ಚಿನ ಕಂಬಳ ವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ. ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಹೊಂದಿರುವ ಶ್ರೀನಿವಾಸ ಗೌಡ ಅವರು ಒಂದೇ ಸ್ಪರ್ಧೆಯಲ್ಲಿ 6 ಪದಕಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ತಮ್ಮದಾಗಿಸಿ ಕೊಂಡಿದ್ದಾರೆ.
ಈ ಹಿಂದೆ ಅಂದರೆ ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು, 8.89 ಸೆಕೆಂಡ್ ನಲ್ಲಿ 100 ಮೀಟರ್ ಕಂಬಳ ಕೋಣಗಳನ್ನು ಓಡಿಸಿ ದಾಖಲೆ ಮಾಡಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಹಿಂದಿಕ್ಕಿರು ಅವರು, ಮಾ.28 ರಂದು ದ.ಕ ಜಿಲ್ಲೆಯ ಬಂಟ್ವಾಳದ ಕಕ್ಕೆಪದವಿನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ ನಡೆದ ಕಂಬಳದಲ್ಲಿ ಮಿಜಾರು ಪ್ರಸಾದ್ ನಿಲಯದ ಶಕ್ತಿಪ್ರಸಾದ್ ರವರ ಕೋಣಗಳನ್ನು ಓಡಿಸಿದ ಶ್ರೀನಿವಾಸಗೌಡ ಅವರು, ಈ ಬಾರಿಯ ಕಂಬಳದ ಋತುವಿನಲ್ಲಿ ಅತಿ ಹೆಚ್ಚು ಅಂದರೆ 18 ಪದಕಗಳನ್ನು ಗಳಿಸಿದ್ದಾರೆ. ಅಲ್ಲದೆ ಎರಡು ದಿನಗಳ ಕಾಲ ನಡೆದ ಕಕ್ಕೆಪದವು ಜೋಡುಕರೆ ಕಂಬಳದ ಒಂದೇ ಸ್ಪರ್ಧೆಯಲ್ಲಿ ಶ್ರೀನಿವಾಸ್ ಗೌಡ 6 ಪದಕಗಳನ್ನು ಪಡೆದು ಮತ್ತೊಂದು ಸಾಧನೆ ಮಾಡಿದ್ದಾರೆ.
ಕಳೆದ ವರ್ಷ 15 ಕಂಬಳಗಳಲ್ಲಿ 45 ಪದಕಗಳನ್ನ ಶ್ರೀನಿವಾಸ್ ಗೌಡರು ತಮ್ಮದಾಗಿಸಿಕೊಳ್ಳುವ ಮೂಲಕ ಚಾಂಪಿಯನ್ ಆಗಿದ್ದರು. ಮೂರು ಕಂಬಳಗಳ ನಾಲ್ಕು ವಿಭಾಗಗಳಲ್ಲಿ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು.