ಕಾರು ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ- ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ್ಯು
ವಿಟ್ಲ: ಕಾರು ಹಾಗೂ ಆಟೋ ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ತಿರುವಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕೊಡಾಜೆ ಪಂತಡ್ಕ ನಿವಾಸಿ ಅಮ್ಮಿ ಮೃತಪಟ್ಟ ಆಟೋ ರಿಕ್ಷಾ ಚಾಲಕ. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಾಲಕನ ಪತ್ನಿಯ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಣಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕೊಡಾಜೆ ಕಡೆಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಕಾರಿನ ಮೇಲೆ ಉರುಳಿ ಬಿದ್ದಿದ್ದು, ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.