ರಂಗಭೂಮಿಯಿಂದ ನಾಗರೀಕ ಪ್ರಜ್ಞೆ ಮೂಡುತ್ತದೆ: ಅಚ್ಯುತ ಕಲ್ಮಾಡಿ

ಕಲಾವಿದ ಸಂಜೀವ ಕರ್ಕೇರ ಅವರನ್ನು ರಂಗಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು.

ಉಡುಪಿ: ಆಧುನಿಕವಾದ ಮನೋರಂಜನೆಗಳು ತಂತ್ರಜ್ಞಾನದ ಕೃಪೆ ಮತ್ತು ವ್ಯವಹಾರಿಕವಾದುದು. ಇದರಲ್ಲಿ ಮೌಲ್ಯಗಳಿಗಿಂತ ಆಕರ್ಷಣೆ ಹೆಚ್ಚಿರುತ್ತದೆ. ಆದರೆ ರಂಗಭೂಮಿಯಲ್ಲಿ ನಟನೆ, ನಿರ್ದೇಶನ, ಕಲೆ, ಸಾಹಿತ್ಯ, ಇವೆಲ್ಲವೂ ಅನುಭವಾತ್ಮಕ ನೆಲೆಯಲ್ಲಿ ಎಲ್ಲಾ ನ್ಯೂನ್ಯತೆಗಳನ್ನು ಪರಿಹರಿಸುವುದರೊಂದಿಗೆ ಪ್ರಜ್ಞಾವಂತ ನಾಗರೀಕರನ್ನು ರೂಪಿಸುವ ಅಗತ್ಯ ಕೆಲಸವಾಗುತ್ತಿದೆ ಎಂದು ಹಿರಿಯ ಸಾಮಾಜಿಕ ಮುಂದಾಳು ಅಚ್ಯುತ ಅಮೀನ್ ಕಲ್ಮಾಡಿ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಸುಮನಸಾ ಕೊಡವೂರು ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವ ದೆಹಲಿ, ನಗರಸಭೆ ಉಡುಪಿ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ರಂಗಹಬ್ಬ -೯ರ ೫ನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನ್ನಾಡಿ ಈ ಸಂಸ್ಥೆ ಪ್ರತಿಯೊಂದು ಕ್ಷೇತ್ರವನ್ನು ಗಮನಾರ್ಹವಾಗಿ ಪ್ರತಿನಿಧಿಸುತ್ತಿದೆ. ವಿಶೇಷವಾಗಿ ತೆರೆಮರೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ,ಗೌರವಿಸುವ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಚಲಿತ ದಿನಕ್ಕೆ ಒಂದು ಆದರ್ಶವಾದ ಸಂಘಟನೆ ಸುಮನಸಾ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಜು ಪೂಜಾರಿ, ಉಡುಪಿ ನಗರಸಭಾ ಸದಸ್ಯ ದೇವದಾಸ್ ವಿ. ಶೆಟ್ಟಿಗಾರ್, ಸಮಾಜಸೇವಕ ಕೃಷ್ಣ ದೇವಾಡಿಗ ಕೊಡವೂರು, ನಾರಾಯಣಗುರು ಅರ್ಬನ್ ಕೋ- ಅಪರೇಟಿವ್ ಬ್ಯಾಂಕ್‌ನ ಉಪಾಧ್ಯಕ್ಷೆ ವಿಜಯ ಗೋಪಾಲ ಬಂಗೇರ, ಕೊಡವೂರು ಸಿ.ಎ.ಬ್ಯಾಂಕ್ ನಿರ್ದೇಶಕ ರತ್ನಾಕರ್ ಅಮೀನ್, ಉಡುಪಿ ಮಲಬಾರ್ ಗೋಲ್ಡ್‌ನ ಪ್ರವರ್ತಕ ಹಫೀಜ್ ರೆಹಮಾನ್ ಉಪಸ್ಥಿತರಿದ್ದರು.
ಪರ್ತಕರ್ತ ಬಾಲಕೃಷ್ಣ ಶಿರ್ಬಾಲ ಅವರ ತುಳು ನಾಟಕ ಕೃತಿ ಕಾಪ ವನ್ನು ಸಾಮಾಜಿಕ ಹೋರಾಟಗಾರ್ತಿ ಆತ್ರಾಡಿ ಅಮೃತಾ ಶೆಟ್ಟಿ ಅವರು ಅನಾವರಣಗೊಳಿಸಿ ಸಮಾಜದಲ್ಲಿರುವ ತಾರತಮ್ಯ, ಶೋಷಣೆಯ ಮಟ್ಟದ ಕುರಿತು ಕಾಪ ನಾಟಕ ಬೆಳಕು ಚೆಲ್ಲುತ್ತದೆ. ಪ್ರಚಲಿತ ದಿನದಲ್ಲಿ ಪರಿವರ್ತನೆ ಹಾಗೂ ಸಮಾನತೆಯು ನಮ್ಮೊಳಗಿನ ಇಚ್ಚಾಶಕ್ತಿಯ ಸಾಧ್ಯತೆ ಎನ್ನುವ ಲೇಖಕರ ಆಶಯ ವಿಸ್ತಾರಗೊಳ್ಳಲು ಈ ನಾಟಕ ಕೃತಿ ಹೆಚ್ಚು ಸೂಕ್ತವಾದುದು ಎಂದರು. ವೇದಿಕೆಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಬಾಲಕೃಷ್ಣ ಶಿರ್ಬಾಲ, ಜಗದೀಶ್ ಚೆನ್ನಂಗಡಿ ಉಪಸ್ಥಿತರಿದ್ದರು. ಪ್ರವೀಣ್ಚ್ಂದ್ರ ತೋನ್ಸೆ ಸ್ವಾಗತಿಸಿದರು. ಶ್ರೀವತ್ಸ ರಾವ್ ವಂದಿಸಿದರು. ರಾಧಿಕಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕಲಾವಿದ ಸಂಜೀವ ಕರ್ಕೇರ ಅವರನ್ನು ರಂಗಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು. ಬಳಿಕ ಭೂಮಿಕಾ ಹಾರಾಡಿ ತಂಡದಿಂದ ನಮ್ಮ ನಿಮ್ಮೊಳಗೊಬ್ಬ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!