ಉಡುಪಿ: ಪೆಟ್ರೋಲ್ ಪಂಪ್ ಮಾಲಕ ಆತ್ಮಹತ್ಯೆಯ ಕಾರಣ ನಿಗೂಢ, ಜಿಗಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ಮಠದಬೆಟ್ಟಿನ ಪ್ಲಾಟ್‌ವೊಂದರ ನಾಲ್ಕನೇ ಮಹಡಿಯಿಂದ ಪೆಟ್ರೋಲ್ ಪಂಪ್ ಮಾಲಕ ಉತ್ತಮ್ ನಾಯಕ್ (30) ಹಾರಿ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ.

ಉತ್ತಮ್ ನಾಯಕ್ ದೊಡ್ಡಪ್ಪನ ಮಗ ಕಳೆದ ವರ್ಷ ಇದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದು, ಅದರ ವರ್ಷಾಂತಿಕ ಕ್ರಿಯೆಗೆ ತಂದೆ ಮತ್ತು ಸಹೋದರಿ ಹೋಗಿದ್ದರು. ಆದರೆ ತಾನು ಬರಲ್ಲ ಎಂದು ಮನೆಯವರಿಗೆ ತಿಳಿಸಿದ ಉತ್ತಮ್ ಕಲ್ಪನಾ ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ ಮನೆಗೆ ಬಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಂದೆ, ಸಹೋದರಿ ಮನೆಗೆ ಬಂದಾಗ ತನ್ನ ಕೊಠಡಿಯಲ್ಲಿದ್ದ ಉತ್ತಮ್ ನಂತರ ಏಕಾಏಕಿ ಮೂರನೇ ಮಹಡಿಯಿಂದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಳೆದ ಹಲವಾರು ಸಮಯಗಳಿಂದ ಯಾವುದೋ ಒತ್ತಡದಿಂದ ಉತ್ತಮ್ ಮನೆಯವರೊಂದಿಗೆ ಸರಿಯಾಗಿ
ಮಾತನಾಡುತ್ತಿರಲಿಲ್ಲವೆಂದು ತಿಳಿದು ಬಂದಿದೆ.

ಪರ್ಕಳದಲ್ಲಿ ಪೆಟ್ರೋಲ್ ಪಂಪ್ ವ್ಯವಹಾರ ಇತ್ತೀಚೆಗಷ್ಟೇ ಪ್ರಾರಂಭಸಿದ್ದ ಉತ್ತಮ್ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ.

Leave a Reply

Your email address will not be published. Required fields are marked *

error: Content is protected !!