ವಿದ್ಯಾಪೋಷಕ್ ನೆರವು ಪಡೆದ ವಿದ್ಯಾರ್ಥಿಗೆ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ 5ನೇ ರ್‍ಯಾಂಕ್

ವಿದ್ಯಾಪೋಷಕ್ ಮೂಲಕ ಆರ್ಥಿಕ ನೆರವು ಪಡೆದು ಅನೇಕ ವಿದ್ಯಾರ್ಥಿಗಳು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅದರಂತೆ ಇದೀಗ ವಿದ್ಯಾಪೋಷಕ್ ವಿದ್ಯಾರ್ಥಿಗಳ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಈಗಾಗಲೇ ವಿದ್ಯಾಪೋಷಕ್ ಆರ್ಥಿಕ ನೆರವು ಮತ್ತು ಮಾರ್ಗದರ್ಶನದಿಂದ ಹತ್ತಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ ಹೀಗೆ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಂಸ್ಥೆಯ ಪ್ರಯತ್ನಕ್ಕೆ ಧನ್ಯತೆಯ ಭಾವ ಒದಗಿಸಿದ್ದಾರೆ.

ಇದೀಗ ಆ ಸಾಲಿಗೆ ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಅಭಿಷೇಕ್ ಶೆಟ್ಟಿ ಸೇರ್ಪಡೆಯಾಗಿದ್ದಾರೆ. ರಿಕ್ಷಾ ಚಾಲಕ ಸುರೇಶ ಶೆಟ್ಟಿ ಹಾಗೂ ಸಂಪಾವತಿ ಶೆಟ್ಟಿ ದಂಪತಿಯ ಮಗನಾಗಿರುವ ಅಭಿಷೇಕ್ ಶೆಟ್ಟಿ ಅವರು ಗ್ರಾಜುವೇಟ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್ )ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಪಡೆದಿದ್ದಾರೆ. ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಭಿಷೇಕ್ ಶೆಟ್ಟಿ ಅವರು ಶಂಕರನಾರಾಯಣ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 92.16% ಹಾಗೂ ಪಿ.ಯು.ಸಿ ಯಲ್ಲಿ 96% ಅಂಕ ಗಳಿಸಿ ಸರಕಾರಿ ಕೋಟಾದಲ್ಲಿ ಮೈಸೂರು ಎನ್‍ಐಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಸೀಟ್ ಪಡೆದು ಮೂರು ಮತ್ತು ನಾಲ್ಕನೇ ವರ್ಷದಲ್ಲಿ ಮಷಿನ್ ಡಿಸೈನ್ ಕುರಿತು ಚಿನ್ನದ ಪದಕ ಪಡೆದಿದ್ದನು. ಮುಂದೆ ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್‍ನಲ್ಲಿ ಸಂಶೋಧನಾ ವಿಭಾಗದ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದರು.

ಇದೀಗ ಗೇಟ್ ಪರೀಕ್ಷಯಲ್ಲಿ ಐದನೇ ರ್ಯಾಂಕ್ ಪಡೆಯುವ ಮೂಲಕ  ತಮ್ಮ ಊರಿಗೆ ಮಾತ್ರವಲ್ಲದೆ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದ್ದಾರೆ. ಇವರು ಮಾತ್ರವಲ್ಲದೆ ಇವರ ತಮ್ಮ ಕೀರ್ತನ್ ಶೆಟ್ಟಿಯೂ ಕೂಡಾ ವಿದ್ಯಾಪೋಷಕ್ ವಿದ್ಯಾರ್ಥಿಯಾಗಿದ್ದು ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್ ಓದುತ್ತಿದ್ದಾರೆ. ಈ ಇಬ್ಬರು ಸಹೋದರರಿಗೆ ಕಲಿಕೆಗಾಗಿ ವಿದ್ಯಾಪೋಷಕ್ ಪ್ರತೀ ವರ್ಷ ದೊಡ್ಡ ಮೊತ್ತದ ನೆರವು ನೀಡುತ್ತಾ ಬಂದಿದೆ.

Leave a Reply

Your email address will not be published. Required fields are marked *

error: Content is protected !!