ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ: 3ನೇ ವಿಡಿಯೋ ಬಿಡುಗಡೆ ಮಾಡಿದ ಯುವತಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿರುವ ಯುವತಿ ಶುಕ್ರವಾರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ನಿನ್ನೆ ಅಜ್ಞಾತ ಸ್ಥಳದಿಂದ ಎರಡನೇ ವಿಡಿಯೋ ಹರಿಬಿಟ್ಟಿದ್ದ ಯುವತಿ ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದು, ಕಳೆದ 24 ದಿನಗಳಿಂದ ನಾನು ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ನಾನು ಕಂಗಾಲಾಗಿದ್ದೆ. ಆದರೆ ಈಗ ಎಲ್ಲಾ ಪಕ್ಷದ ನಾಯಕರು, ಸಂಘಟನೆಗಳು ಮತ್ತು ರಾಜ್ಯದ ಜನ ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ಧೈರ್ಯ ಬಂದಿರುವದರಿಂದ ರಮೇಶ್ ಜಾರಕಿಹೊಳಿ ವಿರುದ್ಧ ಇಂದು ಮಧ್ಯಾಹ್ನ ದೂರು ನೀಡುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ವಕೀಲ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಿಸುವುದಾಗಿ ಯುವತಿ ತಿಳಿಸಿದ್ದಾರೆ.
ನಿನ್ನೆ ಎಸ್ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಯುವತಿ, ನನಗೆ ನನ್ನ ತಂದೆ-ತಾಯಿಯ ಸುರಕ್ಷತೆ ಮುಖ್ಯ. ನನ್ನ ತಂದೆ-ತಾಯಿಗೆ ರಕ್ಷಣೆ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಸಂಘಟನೆಗೆ ಯುವತಿ ಮನವಿ ಮಾಡಿದ್ದರು.
ನನ್ನ ತಂದೆ-ತಾಯಿ ಸುರಕ್ಷಿತವಾಗಿದ್ದಾರೆ ಎಂಬುದು ಖಾತ್ರಿಯಾದ ಬಳಿಕವೇ ನಾನು ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದು ಯುವತಿ ಹೇಳಿದ್ದರು.