ಉಡುಪಿ-ದ.ಕ. ಜಿಲ್ಲೆಗೆ ಲವಣಾಂಶ ರಹಿತ ಮರಳು ಪೂರೈಕೆ: ಮುರುಗೇಶ್ ನಿರಾಣಿ

ಬೆಂಗಳೂರು: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಮಂಗಳವಾರ ವಿಧಾನಪರಿಷತ್ ಗೆ ತಿಳಿಸಿದರು.

ಕಾಂಗ್ರೆಸ್ ನ ಕೆ.ಪ್ರತಾಪ ಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉಪ್ಪಿನಂಶ ಇರುವ ಮರಳು ಬಳಕೆಯಿಂದ ಗುಣಮಟ್ಟ ಹಾಳಾಗುತ್ತದೆ ಎಂದು ಸಮಿತಿಯು ನೀಡಿದ ವರದಿ ಆಧಾರದ ಮೇಲೆ ಈ ಕ್ರಮ ತೆಗೆದುಕೊಂಡಿದ್ದೇವೆ. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಆಧರಿಸಿ ಲವಣ ಮಿಶ್ರಿತ ಮರಳು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದೇವೆ. ಎಲ್ಲಿಯಾದರೂ ಪೂರೈಕೆ ಮಾಡುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಮತ್ತೆ ಈ ಮರಳನ್ನು ಬಳಸಲಾಗುತ್ತಿದೆ ಎಂದಾಗ ಉತ್ತರ ನೀಡಿದ ಸಚಿವರು ನದಿಯ ನೀರು ಸಮುದ್ರಕ್ಕೆ ಸೇರುವ ಕಡೆಗಳಲ್ಲಿ ಮರಳು ದಿಬ್ಬದಿಂದ ಮರಳನ್ನು ಸಂಗ್ರಹಿಸಲಾಗುತ್ತದೆ. ಅದರ ಗುಣಮಟ್ಟ ಪರಿಶೀಲಿಸಿ ಲವಣಾಂಶ ಇಲ್ಲದೆ ಇರುವ ಮರಳನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು. ಉಡುಪಿ ಜಿಲ್ಲೆಯಲ್ಲಿ 2018 ರಿಂದ 2021ರ ವರೆಗೆ 28 ಬ್ಲಾಕ್ ಗಳಲ್ಲಿ 3.47  ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ ಎಂದರು.

2019-20ರಲ್ಲಿ 8.50 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಪೈಕಿ 4.23 ಲಕ್ಷ ಮೆಟ್ರಿಕ್ ಟನ್ ವಿತರಿಸಿದ್ದೇವೆ. ಇದೇ ವರ್ಷ 253.85 ಲಕ್ಷ ರಾಜಸ್ವವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.ಪ್ರಸಕ್ತ ವರ್ಷದ ಫೆಬ್ರವರಿ ಅಂತ್ಯಕ್ಕೆ 9 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು, ಇದರಲ್ಲಿ 4.86 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದ್ದು, 393.85 ಲಕ್ಷ ರಾಜಸ್ವ ಸಂಗ್ರಹಣೆಯಾಗಿದೆ.  ಫೆಬ್ರವರಿ ಅಂತ್ಯಕ್ಕೆ 162 ಪ್ರಕರಣನ್ನು ಪತ್ತೆಹಚ್ಚಿ 32 ಮೊಕದ್ದಮೆಗಳನ್ನು ದಾಖಲಿಸಿದ್ದೇವೆ. ಇದರಲ್ಲಿ 36.70 ಲಕ್ಷ ದಂಡ ವಸೂಲಿ ಹಾಗೂ 418 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಜಿಲೆಟಿನ್ ಸೇರಿದಂತೆ ಇನ್ನಿತರ ಸ್ಫೋಟಕಗಳನ್ನು ಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸುವಂತೆ ಮತ್ತೊಮ್ಮೆ ಎಚ್ಚರಿಕೆ ನೀಡುವುದಾಗಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಮತ್ತೊಂದು  ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಲ್ಲು ಕ್ವಾರಿ ಸ್ಫೋಟ ಪ್ರಕರಣ ಪುನರಾವರ್ತಿತವಾಗದಂತೆ ಬಿಗಿ ಕ್ರಮ ಕೈಗೊಂಡಿದೆ. ಅಕ್ರಮ ಸ್ಫೋಟಕಗಳ ಸಂಗ್ರಹಿಸುವವರು, ಸಾಗಿಸುವವರು ಬಳಸುವವರ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ಎಲ್ಲಾ ರಾಜ್ಯಗಳಲ್ಲಿ ಅಕ್ರಮ ಸಂಗ್ರಹಣೆಯನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!