ವಿಟ್ಲ: ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ
ವಿಟ್ಲ: ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿಟ್ಲ ಸಾಲೆತ್ತೂರು ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಇಂದು ನಡೆದಿದೆ. ವಿಟ್ಲ ಎಸ್ಐ ವಿನೋದ್ ರೆಡ್ಡಿ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ವಿಟ್ಲ ಸಾಲೆತ್ತೂರು ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಎಸ್ಐ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಕಾರು ತಪಾಸಣೆಯ ನಡೆಸುತ್ತಿದ್ದರು. ಈ ವೇಳೆ ಬಂದ ಬಿಳಿ ಬಣ್ಣದ ಕಾರಿನಲ್ಲಿದ್ದ ಆರೋಪಿಗಳು ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕಾರಿನಲ್ಲಿ ಐವರು ಇದ್ದರು ಎನ್ನಲಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರಿನಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.