ರೈತರ ಹೋರಾಟಕ್ಕಿಂದು 4 ತಿಂಗಳು: ಕೃಷಿ ಮಸೂದೆ ರದ್ದತಿಗೆ ಆಗ್ರಹಿಸಿ ಭಾರತ್ ಬಂದ್
ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 4 ತಿಂಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ಕೊಟ್ಟಿರುವ ಬೆನ್ನಲ್ಲೇ ದೇಶದ ಹಲವೆಡೆ ಪ್ರತಿಭಟನೆಗಳು ಆರಂಭಗೊಂಡಿವೆ.
ಅಮೃತಸರ ಸೇರಿದಂತೆ ಪಂಜಾಬ್ನ ಹಲವು ನಗರಗಳಲ್ಲಿ ರೈಲುಗಳ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ದೆಹಲಿಯ ಗಾಜಿಪುರ, ಸಿಂಘು ಗಡಿಗಳಲ್ಲಿ ಧರಣಿ ನಡೆಸುತ್ತಿರುವ ರೈತರು ನೃತ್ಯ ಮಾಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.
ಇನ್ನು ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಡಪಕ್ಷಗಳ ಕಾರ್ಯಕರ್ತರು ರಸ್ತೆಗಳನ್ನು ತಡೆದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಎರಡನೇ ಭಾರತ್ ಬಂದ್ ಇದಾಗಿದೆ. ಡಿ.8ರಂದು ರೈತರು ನಡೆಸಿದ್ದ ಬಂದ್’ಗೆ ದೆಹಲಿ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಹಲವು ಕಾರ್ಮಿಕ ಸಂಘಟನೆಗಳು, ಕಾಂಗ್ರೆಸ್, ಎನ್’ಸಿಪಿ ಸೇರಿದಂತೆ 24 ರಾಜಕೀಯ ಪಕ್ಷಗಳು ಆ ಬಂದ್’ಗೆ ಬೆಂಬಲ ನೀಡಿದ್ದವು. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದ್ದು, ಎಲ್ಲಾ ಅಂಗಡಿ-ಮುಂಗಟ್ಟುಗಳು ಮುಚ್ಚಲಿವೆ. ರಸ್ತೆ, ರೈಲು ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ರೈತ ಸಂಘಟನೆಗಳು ತಿಳಿಸಿವೆ.
ಇದೇ ವೇಳೆ ಮಾರ್ಚ್ 28ರಂದು ಹೋಳಿ ಹಬ್ಬ ಇದ್ದು, ಅಂದು ಹೋಳಿ ದಹನದ ವೇಳೆಗೆ ಕೃಷಿ ಕಾಯ್ದೆಗಳನ್ನು ರೈತರು ದಹಿಸಲಿದ್ದಾರೆಂದು ತಿಳಿಸಿದ್ದಾರೆ.
ಈ ನಡುವೆ ಭಾರತ್ ಬಂದ್ ಹಿನ್ನೆಲೆ ಘಾಜಿಪುರ ಗಡಿ ರಾಷ್ಟ್ರೀಯ ಹೆದ್ದಾರಿ 24ರನ್ನು ಬಂದ್ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಜನರು ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕಿದ್ದು, ಮಾಸ್ಕ್, ಸ್ವಚ್ಛಗೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಬೇಕೆಂದು ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಸಾಮಾನ್ಯ ಜನ ಜೀವನದ ಮೇಲೆ ಪರಿಣಾಮ ಬೀರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಹದಗೆಡಲು ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ. ಈಗಾಗಲೇ ಬ್ಯಾರಿಕೇಡ್ ಗಳನ್ನೂ ಅಳವಡಿಸಲಾಗಿದೆ ಎಂದು ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.