ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಾಳೆ ‘ಭಾರತ್ ಬಂದ್’ಗೆ ಕರೆ

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಾಳೆ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧೆಡೆ ಪ್ರತಿಭಟನೆ ಹಾಗೂ ಕೃಷಿ ಕಾಯ್ದೆಗಳ ಶವಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಐಕ್ಯ ಹೋರಾಟ ಸಮಿತಿ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಕೇಂದ್ರದ ಕೃಷಿ ವಿನಾಶ ಕಾಯ್ದೆ, ರೈತರ ಮರಣ ಶಾಸನ ವಿರೋದಿಸಿ ರಾಜ್ಯದ ಎಲ್ಲಾ ನಗರಗಳ ಜಿಲ್ಲಾ ಕೇಂದ್ರಗಳಲ್ಲಿ ಕೃಷಿ ಕಾಯ್ದೆಗಳ ಶವಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯು ಮಾ.26 ರಂದು ಬೆಂಗಳೂರಿನ ಟೌನ್ ಹಾಲ್ ನಿಂದ ಮೈಸೂರ್ ಬ್ಯಾಂಕ್ ವೃತ್ತದವರೆಗೆ ಕೃಷಿ ಕಾಯ್ದೆಗಳ ಶವಯಾತ್ರೆ ನಡೆಯಲಿದ್ದು, ನಾಯಂಡಹಳ್ಳಿ ಸುತ್ತಮುತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳನ್ನು ವಿರೋದಿಸಿ ಹೋರಾಟ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆ ಮಾ.26ಕ್ಕೆ ನಾಲ್ಕು ತಿಂಗಳು ಪೂರೈಸಲಿದ್ದು, ಇದರ ಅಂಗವಾಗಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚ ಭಾರತ್ ಬಂದ್‍ಗೆ ಕರೆ ನೀಡಿದೆ. ಈ ಕರೆಯನ್ನು ರಾಜ್ಯದ ರೈತರು ಕೂಡ ಬೆಂಬಲಿಸಿದ್ದು, ಇದರ ಅಂಗವಾಗಿ ಕೃಷಿ ಕಾಯ್ದೆಗಳ ಶವಯಾತ್ರೆ, ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ಕೃಷಿ ಮಸೂದೆಗಳನ್ನು ವಿರೋದಿಸಿ ನಾಳೆ ಬಂಟ್ವಾಳದ ಬಿಸಿ ರೋಡ್‍ನಲ್ಲಿ ಬೃಹತ್ ಪ್ರತಿಭಟನಾಸಭೆ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ರೈತ, ದಲಿತ, ಕಾರ್ಮಿಕ, ಜನಪರ ಚಳವಳಿ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ದೆಹಲಿಯ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ರವಿಪೂಣಚ್ಚ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!