ಎಟಿಎಂ ಬಳಕೆದಾರರೇ ಎಚ್ಚರ… ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಫೈನ್!
ನವದೆಹಲಿ: ಗ್ರಾಹಕರು ಬ್ಯಾಂಕ್ ಖಾತೆಗಳು ಮತ್ತು ಎಟಿಎಂ ಗಳಿಂದ ಹಣ ಹಿಂಪಡೆಯುವುದು ಸಾಮಾನ್ಯ. ದೇಶದಲ್ಲಿ ಬಹುಸಂಖ್ಯೆಯ ಜನ ಬ್ಯಾಂಕುಗಳಲ್ಲಿ ಖಾತೆ ತೆರೆದಿದ್ದಾರೆ.
ಬ್ಯಾಂಕುಗಳು ಅನೇಕ ಸೇವೆಗಳನ್ನು ಉಚಿತವಾಗಿ ನೀಡುತ್ತವೆ. ಆದರೆ, ಕೆಲವು ಸೇವೆಗಳಿಗೆ ಶುಲ್ಕ ವಿಧಿಸುತ್ತವೆ. ಎಟಿಎಂ ವಹಿವಾಟು ನಡೆಸುವಾಗ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದ ಸಂದರ್ಭದಲ್ಲಿ ಶುಲ್ಕ ವಿಧಿಸಲಾಗುತ್ತದೆ.
ಉದಾಹರಣೆಗೆ ನಿಮ್ಮ ಖಾತೆಯಲ್ಲಿ 3000 ರೂ. ಇದ್ದರೆ ಎಟಿಎಂನಿಂದ 3500 ರೂ. ವಿತ್ ಡ್ರಾ ಮಾಡಲು ಮುಂದಾದರೆ ವ್ಯವಹಾರ ವಿಫಲಗೊಳ್ಳುತ್ತದೆ. ಆಗ ಖಾತೆಯಲ್ಲಿ ಬ್ಯಾಲೆನ್ಸ್ ನಿರ್ದಿಷ್ಟ ಮೊತ್ತ ಇಲ್ಲದಿದ್ದರೆ ಎಟಿಎಂ ಮೂಲಕ ವಹಿವಾಟು ವಿಫಲವಾದರೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಪ್ರತಿ ವಹಿವಾಟಿಗೆ 20 ರಿಂದ 25 ರೂಪಾಯಿ ಶುಲ್ಕ ವಿಧಿಸಲಾಗುವುದು.
ಎಟಿಎಂ ವಹಿವಾಟಿನ ಈ ನಿಯಮ 2020 ರ ಡಿಸೆಂಬರ್ ನಿಂದಲೇ ಜಾರಿಗೆ ಬಂದಿದೆ. ಬ್ಯಾಂಕ್ ಖಾತೆಯಲ್ಲಿ ಮೊತ್ತ ಕಡಿಮೆಯಾದ ಕಾರಣ ಎಟಿಎಂಗಳಲ್ಲಿ ನಿಮ್ಮ ವಹಿವಾಟು ವಿಫಲವಾದರೆ ನೀವು ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಹಣ ವಿತ್ ಡ್ರಾ ಮಾಡುವ ಮೊದಲು ನೀವು ನಿಮ್ಮ ಖಾತೆಯಲ್ಲಿರುವ ಬಾಕಿ ಮೊತ್ತವನ್ನು ಪರಿಶೀಲಿಸುವುದು ಒಳ್ಳೆಯದು.
ವಿವಿಧ ಬ್ಯಾಂಕುಗಳಲ್ಲಿ ವಿವಿಧ ರೀತಿಯ ಶುಲ್ಕ ವಿಧಿಸಲಾಗುತ್ತದೆ. ದೇಶದ ಅತಿದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್(Bank) ಆಗಿರುವ ಎಸ್ಬಿಐ ಗ್ರಾಹಕರು ಬ್ಯಾಲೆನ್ಸ್ ಇಲ್ಲದೆ ಎಟಿಎಂ ವಹಿವಾಟು ವಿಫಲವಾದರೆ 20 ರೂಪಾಯಿ ದಂಡ ಪಾವತಿಸಬೇಕು. ಇದರ ಮೇಲೆ ಜಿಎಸ್ಟಿ ಕೂಡ ವಿಧಿಸಲಾಗುತ್ತದೆ.
ಕಡಿಮೆ ಬ್ಯಾಲೆನ್ಸ್ ಉಳಿಸಿಕೊಂಡ ವಹಿವಾಟು ವಿಫಲವಾದರೆ HDFC ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳಲ್ಲಿ ದಂಡ ವಿಧಿಸಲಾಗುವುದು.
HDFC ಬ್ಯಾಂಕ್ನಲ್ಲಿ ವಹಿವಾಟು ವಿಫಲವಾದರೆ 25 ರೂ. ದಂಡ ಪಾವತಿಸಬೇಕಾಗುತ್ತದೆ. ಕೊಟಕ್ ಮಹೀಂದ್ರ ಬ್ಯಾಂಕ್ ಕೂಡ 25 ರೂಪಾಯಿ ದಂಡ ವಿಧಿಸುತ್ತದೆ. ಅಲ್ಲದೇ, ಬ್ಯಾಲೆನ್ಸ್ ಇಲ್ಲದ ಖಾತೆಗಳಿಗೆ ಪ್ರತಿ ತಿಂಗಳು 25 ರೂ. ಶುಲ್ಕ ವಿಧಿಸಲಾಗುವುದು. ಆಕ್ಸಿಸ್ ಬ್ಯಾಂಕ್ ಎಟಿಎಂ ವಹಿವಾಟಿಗೆ 25 ರೂ. ಶುಲ್ಕ ವಿಧಿಸುತ್ತದೆ.
ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದು ನಿಮಗೆ ನೆನಪಿಲ್ಲದಿದ್ದರೆ ಎಟಿಎಂಗೆ ಹೋಗುವ ಮೊದಲು ಬ್ಯಾಲೆನ್ಸ್ ಚೆಕ್ ಮಾಡಬೇಕು. ಹೆಚ್ಚಿನ ಬ್ಯಾಂಕುಗಳು SMS ಮತ್ತು ಕರೆ ಮೂಲಕ ಖಾತೆಯ ಬಾಕಿ ಪರಿಶೀಲಿಸುವ ಸೌಲಭ್ಯ ನೀಡಿವೆ. ಇದನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಎಟಿಎಂನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದ್ದು, ಇದಕ್ಕೂ ನಿರ್ದಿಷ್ಟ ಮಿತಿ ಮೀರಿದ ನಂತರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿನ ಬ್ಯಾಂಕುಗಳು 5 ರಿಂದ 8 ವಹಿವಾಟುಗಳನ್ನು ಇತರ ಬ್ಯಾಂಕುಗಳ ಗ್ರಾಹಕರಿಗೆ ಉಚಿತವಾಗಿ ನೀಡುತ್ತವೆ. ಇವುಗಳಲ್ಲಿ ಹಣಕಾಸಿನೇತರ ವಹಿವಾಟುಗಳು ಅಂದರೆ ಬ್ಯಾಲೆನ್ಸ್ ಚೆಕ್ ಸೇರಿವೆ. ನೀವು ಈ ಸೌಲಭ್ಯವನ್ನು ಬಳಸಿದ್ದರೆ, ಮತ್ತೊಂದು ಬ್ಯಾಂಕಿನ ಎಟಿಎಂನಲ್ಲಿ ಬ್ಯಾಲೆನ್ಸ್ ಚೆಕ್ ಕೂಡ ಮಾಡಬೇಡಿ. ನಿಗದಿತ ಮಿತಿಯ ನಂತರ, ಹಣಕಾಸಿನೇತರ ಎಟಿಎಂ ಬಳಕೆಗಾಗಿ SBI 8 ರೂಪಾಯಿ ಶುಲ್ಕ ವಿಧಿಸುತ್ತದೆ. ಜೊತೆಗೆ ಜಿಎಸ್ಟಿ ಕೂಡ ಕಟ್ಟಬೇಕಿದೆ. ಬ್ಯಾಲೆನ್ಸ್ ಚೆಕ್ ಮಾಡಲು ಬ್ಯಾಂಕುಗಳು 5 -8 ಸಲ ಉಚಿತ ಅವಕಾಶ ನೀಡಿ ನಂತರ ಶುಲ್ಕ ವಿಧಿಸುತ್ತವೆ. ಯಾವುದಕ್ಕೂ ಗ್ರಾಹಕರೂ ತಮ್ಮ ಬ್ಯಾಂಕ್ ವ್ಯವಹಾರದ ಉಚಿತ ವಹಿವಾಟುಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.