ಕೋವಿಡ್ 2ನೇ ಅಲೆ: ಹೊಸ ಮಾರ್ಗ ಸೂಚಿ ಪ್ರಕಟ, ಮದುವೆಗೆ 200, ರಾಜಕೀಯ ಕಾರ್ಯಕ್ರಮಕ್ಕೆ– 500 ಮಂದಿಗೆ ಅವಕಾಶ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಬುಧವಾರ ಹೊಸ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಧಾರ್ಮಿಕ, ರಾಜಕೀಯ ಸಮಾವೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ಮತ್ತು ಅಂತರ ಕಾಪಾಡದಿದ್ದರೆ ಆಯೋಜಕರನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದೆ.

ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡದವರ ವಿರುದ್ಧ ಬಿಬಿಎಂಪಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ₹250 ಮತ್ತು ಇತರ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳು, ಇತರೆಡೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗೂ ಮೇಲಿನ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಂಡ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ವಿವರಿಸಿದೆ.

ಕಾರ್ಯಕ್ರಮಗಳಲ್ಲಿ ನಿಗದಿಗಿಂತ ಹೆಚ್ಚು ಜನ ಸೇರಿ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಆ ಜಾಗದ ಮಾಲೀಕರ ಜವಾಬ್ದಾರಿ. ಇಂತಹ ಉಲ್ಲಂಘನೆಗಳಿಗೆ ಹವಾನಿಯಂತ್ರಿತವಲ್ಲದ ಸಭಾಂಗಣಗಳಿಗೆ ₹5 ಸಾವಿರ, ಧಾರ್ಮಿಕ, ರಾಜಕೀಯ ರ್‍ಯಾಲಿಗಳು, ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೋಟೆಲ್‌ಗಳು, ಬ್ರಾಂಡೆಂಡ್ ಅಂಗಡಿಗಳು, ಹೊರಾಂಗಣ ಕಾರ್ಯಕ್ರಮಗಳಿಗೆ ₹10 ಸಾವಿರ ದಂಡ ವಿಧಸಲಾಗುತ್ತದೆ. ಸಭಾಂಗಣದ ಮಾಲೀಕರು ಅಥವಾ ಆಯೋಜಕರು ಈ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಎಷ್ಟು ಜನ ಸೇರಬಹುದು?

ಮದುವೆ: ಹೊರಾಂಗಣ–500, ಒಳಾಂಗಣ–200

ಹುಟ್ಟುಹಬ್ಬದ ರೀತಿಯ ಕಾರ್ಯಕ್ರಮ; ಹೊರಾಂಗಣ–100 , ಒಳಾಂಗಣ –50

ಸಾವು ಅಥವಾ ಅಂತ್ಯಕ್ರಿಯೆ; ಹೊರಾಂಗಣ –100, ಒಳಾಂಗಣ –50

ಧಾರ್ಮಿಕ, ರಾಜಕೀಯ ಕಾರ್ಯಕ್ರಮ; ಹೊರಾಂಗಣ– 500 

ಮದುವೆ-ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ರೂ. 10 ಸಾವಿರ ದಂಡ
ನಿಯಮ ಉಲ್ಲಂಘನೆಗೆ ಎ.ಸಿ. ರಹಿತ ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆಗಳಿಗೆ ರೂ.5 ಸಾವಿರ,  ಎ.ಸಿ. ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆ, ಬ್ರಾಂಡೆಡ್‌ ಶಾಪ್‌, ಶಾಪಿಂಗ್‌ ಮಾಲ್‌ಗಳಿಗೆ ರೂ.10 ಸಾವಿರ, ಸ್ಟಾರ್‌ ಹೋಟೆಲ್‌, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ ರೂ. 10 ಸಾವಿರ ಹಾಗೂ ಸಾರ್ವಜನಿಕ ಸಮಾರಂಭ ಅಥವಾ ರ್ಯಾಲಿಗಳಲ್ಲಿ ನಿಯಮ ಉಲ್ಲಂಘನೆಯಾದರೆ ಆಯೋಜಕರಿಗೆ ರೂ. 10 ಸಾವಿರ ದಂಡ ವಿಧಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!