ಅಜ್ಞಾನಕ್ಕಿಂತ ಅಹಂಕಾರ ತುಂಬಾ ಅಪಾಯಕಾರಿ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ
ನವದೆಹಲಿ: ಕೊರೋನಾ ವೈರಸ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಅಜ್ಞಾನಕ್ಕಿಂತ ಅಹಂಕಾರ ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಐನ್ ಸ್ಟೈನ್ ಅವರ ಅಜ್ಞಾನಕ್ಕಿಂತ ಅಹಂಕಾರ ತುಂಬಾ ಅಪಾಯಕಾರಿ ಎಂಬ ಸಾಲುಗಳನ್ನು ಬರೆದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ‘ಲಾಕ್ ಡೌನ್ ಮೂಲಕ ಮೋದಿ ಸರ್ಕಾರ ‘ಅಜ್ಞಾನಕ್ಕಿಂತ ಅಹಂಕಾರ ತುಂಬಾ ಅಪಾಯಕಾರಿ’ ಎಂಬುದನ್ನು ಪುನಃಸಾಬೀತು ಮಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ ಲಾಕ್ ಡೌನ್ ಗೆ ಸಂಬಂಧಿಸಿದ ಒಂದಷ್ಟು ದತ್ತಾಂಶಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕಿಂತ ದೇಶದ ಆರ್ಥಿಕತೆ ಹೆಚ್ಚಾಗಿ ಕುಸಿದಿದೆ. ಆದರೆ ಸೋಂಕಿತರ ಸಂಖ್ಯೆ ಮತ್ತು ಕೊರೋನಾಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ಕುಸಿತ ಕಂಡಿಲ್ಲ. ಇನ್ನೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಕೇಂದ್ರ ಸರ್ಕಾರ ಹೇರಿದ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದ್ದು, ಇದರಿಂದ ಯಾವುದೇ ರೀತಿಯ ಸಕಾರಾತ್ಮಕ ಅಂಶಗಳು ಕಂಡುಬಂದಿಲ್ಲ. ದೇಶದ ಆರ್ಥಿಕತೆಯನ್ನೇ ಲಾಕ್ ಡೌನ್ ಮುಳುಗಿಸಿದೆ. ಪ್ರತಿಪಕ್ಷಗಳ ಮಾತು ಕೇಳದೇ ಸರ್ಕಾರ ಅಹಂಕಾರದಿಂದ ನಡೆದುಕೊಂಡಿದ್ದರ ದುಷ್ಪರಿಣಾಮವನ್ನು ಇದೀಗ ಇಡೀ ದೇಶವೇ ಭರಿಸುವಂತಾಗಿದೆ. ಪ್ರಸ್ತುತ ಭಾರತದ ಆರ್ಥಿಕತೆಯ ಸಂಕಷ್ಟಕ್ಕೆ ಕೇಂದ್ರ ಸರ್ಕಾರವೇ ನೇರಹೊಣೆ. ಬಡವರ ಕೈಗೆ ಹಣ ತಲುಪಿಸುವ ಮೂಲಕ ಅವರಿಗೆ ಸರ್ಕಾರ ನೆರವಾಗಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.