ಕೋವಿಡ್ ಸಂಕಷ್ಟ: ಆದಾಯ ಹೆಚ್ಚಿಸಿಕೊಳ್ಳಲು ಮದ್ಯಪಾನದ ವಯೋಮಿತಿ 25 ರಿಂದ 21 ವರ್ಷಕ್ಕೆ ಕಡಿತ – ದೆಹಲಿ ಸರ್ಕಾರ
ನವದೆಹಲಿ: ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಾಗ ದೆಹಲಿಯಲ್ಲಿ ಮದ್ಯಪಾನಕ್ಕೆ ವಯಸ್ಸಿನ ಮಿತಿ ಹೇರಿದ್ದ ಕೇಜ್ರಿವಾಲ್ ಸರ್ಕಾರ ಇದೀಗ ಅನಿವಾರ್ಯವಾಗಿ ರಾಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ತಾನೇ ಮಾಡಿದ್ದ ನೀತಿಗೆ ವಿನಾಯಿತಿ ತಂದಿದೆ.
ಹೌದು.. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಅದರಂತೆ ಮದ್ಯ ಸೇವನೆಯ ವಯಸ್ಸಿನ ಮೀತಿಯನ್ನು ಇಳಿಕೆ ಮಾಡಿದ್ದು, ಮದ್ಯಪಾನದ ವಯೋಮಿತಿ 25 ರಿಂದ 21 ವರ್ಷಕ್ಕೆ ಕಡಿತಗೊಳಿಸಿದೆ.
ಸೋಮವಾರ ( ಮಾರ್ಚ್ 22) ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಪರಿಷ್ಕೃತ ನೂತನ ಅಬಕಾರಿ ನೀತಿ ಪ್ರಕಟಿಸಿದ್ದು, ಮದ್ಯ ಸೇವನೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದು 25 ವರ್ಷ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಿದೆ. ತಜ್ಞರ ಸಮಿತಿ ನೀಡಿರುವ ವದಿಯ ಆಧರಿಸಿ ಸರ್ಕಾರ ಈ ಬದಲಾವಣೆ ಮಾಡಲಾಗಿದೆ. 21 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರುವವರು ಮದ್ಯದಂಗಡಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಅಬಕಾರಿ ನೀತಿಯಲ್ಲಿ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದಿಲ್ಲ ಎಂದು ಹೇಳಿಕೊಂಡಿದೆ. ಪರವಾನಗಿ ಇಲ್ಲದ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಅಂತೆಯೇ ಒಂದೇ ಪರವಾನಗಿಯಲ್ಲಿ ಹಲವು ಶಾಖೆಗಳನ್ನು ತೆರೆದಿರುವುದು ಸೇರಿದಂತೆ ಹಲವು ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಇದರಿಂದ ರಾಷ್ಟ್ರ ರಾಜಧಾನಿಗೆ ಮದ್ಯ ಕಳ್ಳಸಾಗಣೆ ಮಾಡುವುದನ್ನು ನಿಲ್ಲಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳ್ಳಸಾಗಣೆ, ಅಕ್ರಮಗಳನ್ನು ತಡೆದರೆ, ಸೋರಿಯಾಗುತ್ತಿರುವ ಶೇಕಡಾ 20 ರಷ್ಟು ಆದಾಯ ಸರ್ಕಾರಕ್ಕೆ ಹರಿದು ಬರಲಿದೆ. ಹೀಗಾಗಿ ದೆಹಲಿ ಸರ್ಕಾರ ಅಬಕಾರಿ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ನಿರ್ಧರಿಸಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.