ಲೈಂಗಿಕ ಹಗರಣ: ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಲು ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು: ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿಂದು ಲೈಂಗಿಕ ಹಗರಣವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಲೈಂಗಿಕ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಮತ್ತು ವಿಶೇಷ ತನಿಖಾ ತಂಡ ಲೈಂಗಿಕ ಹಗರಣದ ಹಿಂದಿರುವ ಪಿತೂರಿ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಆದರೆ, ಸಂತ್ರಸ್ತೆ ಬಗ್ಗೆ ಏನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಮಾಜದ ಮುಂದೆ ಅವಮಾನಕ್ಕೊಳಗಾಗಿದ್ದು, ಸಂತ್ರಸ್ತೆಗೆ ತುಂಬಾ ಅನ್ಯಾಯವಾಗಿದೆ ಎಂದರು.
ಸಂತ್ರಸ್ತೆಯ ವಿಡಿಯೋ ಹೇಳಿಕೆ ಬಗ್ಗೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಒಪ್ಪಿಗೆ ಇಲ್ಲದಿದ್ದರೂ ಉದ್ಯೋಗ ಕೊಡಿಸುವುದಾಗಿ ನಂಬಿಸಿ ರಮೇಶ್ ಜಾರಕಿಹೊಳಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಅಂದರೆ, ಇದರರ್ಥ ಅತ್ಯಾಚಾರವಾಗಿದೆ. ಆದರೂ ಏಕೆ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಕೇಸ್ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ರಮೇಶ್ ಜಾರಕಿಹೊಳಿ, ಸಂತ್ರಸ್ತೆಯ ತಂದೆ ಹಾಗೂ ಸಂತ್ರಸ್ತ ಯುವತಿಯಿಂದ ಮೂರು ದೂರು ದಾಖಲಾಗಿದ್ದು, ಇವುಗಳ ಬಗ್ಗೆ ಸಮಗ್ರ ತನಿಖೆ ನಡಯಬೇಕಾಗಿದೆ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.