ಇಡೀ ವ್ಯವಸ್ಥೆಯೇ ಆರೋಪಿಗಳ ಪರವಾಗಿ ನಿಂತಿದೆ, ಹಲ್ಲೆ ಪ್ರಕರಣ ತನಿಖೆ ಸಿಓಡಿಗೆ ಒಪ್ಪಿಸಿ: ಶಂಕರ್ ಶಾಂತಿ

ಉಡುಪಿ: ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಎಲ್ಲಾ ಶಕ್ತಿ ಕ್ಷೇತ್ರಗಳಿಗೆ ದೂರು ನೀಡಲಿದ್ದು, ಬಾರಕೂರು ಕಾಳಿಕಾಂಬ ಕ್ಷೇತ್ರಕ್ಕೆ ಆಣೆ ಪ್ರಮಾಣಕ್ಕಾಗಿ, ಮಾ.24 ರಂದು ಬಾರ್ಕೂರಿನ ಕಾಳಿಕಾಂಬ ಸನ್ನಿಧಿ ಹಾಗೂ ಕಲ್ಕುಡ ಸನ್ನಿಧಿಗೆ ಬಾರಕೂರು ದೇವಸ್ಥಾನ ಆಡಳಿತ ಮಂಡಳಿಯನ್ನು ಆಹ್ವಾನಿಸುತ್ತಿದ್ದೇನೆ ಎಂದು ಆರ್‍ಟಿಐ ಕಾರ್ಯಕರ್ತ ಶಂಕರ್ ಶಾಂತಿ ತಿಳಿಸಿದ್ದಾರೆ.

ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮೇಲೆ ಹೊರಿಸಲಾಗಿರುವ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ದೇವರ ಸನ್ನಿದಿಯಲ್ಲಿ ಪ್ರಮಾಣ ಮಾಡುತ್ತೇನೆ. ಅದೇ ರೀತಿ ತಾನು ಹಣ ಪಡೆದಿದ್ದೇನೆ ಮೋಸ ಮಾಡಿದ್ದೇನೆ ಎಂಬಿತ್ಯಾದಿ ಆರೋಪ ಮಾಡಿರುವ ಮಾಜಿ ಜಿ.ಪಂ. ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ ಹಾಗೂ ಇತರರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಾನು ನನ್ನ ಮೇಲೆ ಆರೋಪ ಮಾಡಿರುವುದು ನಿಜ ಎಂದ ಆಣೆ ಪ್ರಮಾಣ ಮಾಡಲಿ ಎಂದರು.

ನನ್ನ ಮೇಲಿನ ಹಲ್ಲೆ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಆರೋಪಿಗಳ ಪರವಾಗಿ ನಿಂತಿದೆ. ರಾಜಕೀಯ ಪ್ರಭಾವದಿಂದ ಪೊಲೀಸರ ಮೇಲೆ ಬಹಳಷ್ಟು ಒತ್ತಡಗಳಿವೆ. ಆದುದರಿಂದ ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ಶಂಕರ್ ಶಾಂತಿ ಆಗ್ರಹಿಸಿದ್ದಾರೆ

ದೇವರೇ ಎಲ್ಲಾ ಸತ್ಯ ಧರ್ಮವನ್ನು ತೂಕ ಮಾಡಲಿ ಎಂಬ ನಂಬಿಕೆಯಿಂದ ಬಿ.ಎನ್ ಶಂಕರ ಪೂಜಾರಿ ಹಾಗೂ ಇತರರನ್ನು ದೇವರ ಸನ್ನಿಧಿಗೆ ಆಹ್ವಾನಿಸುತ್ತಿದ್ದೇನೆ. ಬಿ.ಎನ್ ಶಂಕರ ಪೂಜಾರಿ ಅವರು ಪ್ರಬಲ ಕ್ರಿಮಿನಲ್ ಹಿನ್ನೆಲೆಯೊಂದಿದ್ದು, ರಾಜಕೀಯ ಬೆಂಬಲವೂ ಇದೆ. ಇದರೊಂದಿಗೆ ಗೂ0ಡಾಗಳ ಒಡನಾಟವನ್ನು ಹೊಂದಿದ್ದಾರೆ. ಇವರಿಂದ ನನ್ನ ಜೀವಕ್ಕೆ ಇನ್ನೂ ಕೂಡಾ ಅಪಾಯವಿದೆ ಆದ್ದರಿಂದ ಗೃಹ ಸಚಿವರು, ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳು ತನಗೆ ಹಾಗೂ ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸಿಕೊಡಬೇಕು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಇನ್ನು ಶ್ರೀ ಅಮ್ಮನವರ ಮೂರ್ತಿ ಅಲ್ಲಿ ಸಿಕ್ಕಿದೆ ಎಂಬೂದಕ್ಕೆ ನನ್ನ ಬಳಿ ಆಡಿಯೋ ರೆಕಾರ್ಡ್ ಇದ್ದು, ಅದನ್ನು ಸಂಬಂದ ಪಟ್ಟ ಅಧಿಕಾರಿಗಳಿಗೆ ಮುಟ್ಟಿಸುವ ಕೆಲಸ ಮಾಡಿದ್ದೇನೆ. ಈ ವಿಚಾರದಲ್ಲಿ ಹೋರಾಟ ಮಾಡಿ ಎಸಿಬಿ ಗೆ ದೂರು ಕೂಡಾ ನೀಡಿದ್ದು, ತಹಶೀಲ್ದಾರ್, ಜೈನ ಸಮುದಾಯದವರಿಗೂ ದೂರು ನೀಡಿದ್ದೇನೆ. ಈ ಬಗ್ಗೆ ತನಿಖೆ ಬಳಿಕ ಸ್ಥಳದಲ್ಲಿ ಇವರು ಅತಿಕ್ರಮಣ ಮಾಡಿದ್ದು ಸಾಬೀತಾಗಿದ್ದು, ಅದನ್ನು ತೆರವು ಗೊಳಿಸುವಂತೆ ತಹಶೀಲ್ದಾರ್ ನೋಟೀಸ್ ನೀಡಿದ್ದರು. ಅದರಂತೆ, ನೋಟೀಸ್ ನೀಡಿದ ಮೂರು ದಿನಗಳೊಳಗಾಗಿ ಅತಿಕ್ರಮಣ ಗೊಂಡ ಜಾಗವನ್ನು ತೆರವುಗೊಳಿಸಿ ಸರಕಾರಕ್ಕೆ ಒಪ್ಪಿಸುವಂತೆ ಸೂಚನೆ ನೀಡಿದ್ದರು. ಅಲ್ಲದೆ ತೆರವು ಗೊಳಿಸದಿದ್ದರೆ ಕ್ರಮ ಕೈಗೊಳ್ಳುವ ಸೂಚನೆಯನ್ನೂ ನೀಡಿದ್ದರು. ಆಗ ಈ ಬಗ್ಗೆ ಕಾಳಿಕಾಂಬ ದೇವಸ್ಥಾನದ ಜಾತ್ರೆ ನಡೆಯುತ್ತಿರುವುದರಿಂದ ಜಾತ್ರೆ ಬಳಿಕ ತೆರವುಗೊಳಿಸುವುದಾಗಿ ಹೇಳಿದ್ದು, ಈ ವರೆಗೂ ತೆರವುಗೊಳಿಸಿಲ್ಲ ಎಂದರು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ಉಡುಪಿ ಜಿಲ್ಲಾ ಆರ್‍ಟಿಐ ಕಾರ್ಯಕರ್ತರಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು,ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!