ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕದೋಷ – ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ : ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕದೋಷದಿಂದ ಉತ್ಪಾದನೆ ಕುಂಠಿತವಾಗಿದ್ದು  ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. 

ಕರ್ನಾಟಕ ಪವರ್ ಕಾರ್ಪೋರೇಷನ್, ಯುಪಿಸಿಲ್ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ, ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ, ಈ ಹಿನ್ನೆಲೆಯಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. 

ಕೆ.ಪಿ.ಸಿ ನಿಂದ ಸುಮಾರು 2864MW, ಯುಪಿಸಿಲ್ ನಿಂದ  ಸುಮಾರು 1010 MW ರಷ್ಟು ಮತ್ತು ಕೇಂದ್ರಿಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ 407 MW, ಹೀಗೆ ರಾಜ್ಯದ ವಿದ್ಯುತ್ ಜಾಲವು, ಒಟ್ಟು 4281 MW ನಷ್ಟು ಪ್ರಮಾಣದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ, ಇದರಿಂದಾಗಿ ಮೆಸ್ಕಾಂಗೆ ಹಂಚಿಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಸುಮಾರು 20OMW ನಷ್ಟು ಕೊರತೆಯಾಗುವ ಸಂಭವವಿದೆ.

ಆದುದರಿಂದ ಸ್ಟೇಟ್ ಲೋಡ್ ಡಿಸ್ಪಾಚ್ ಸೆಂಟರ್ ನ ಸೂಚನೆಯಂತೆ ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳಲ್ಲಿ, ವಿದ್ಯುತ್ ಜಾಲದ ಸುರಕ್ಷತೆಯ ದೃಷ್ಟಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರಬಹುದು. ನೀರಾವರಿ ಪಂಪ್‌ ಸೆಟ್ಟುಗಳಿಗೆ ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ಮತ್ತು ಮಧ್ಯರಾತ್ರಿಯಿಂದ ಬೆಳಿಗ್ಗೆ 4.00 ರವರೆಗೆ ಮಾತ್ರ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ.

ಮುಂದಿನ ವಾರದ ವೇಳೆಗೆ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆ ನಿರೀಕ್ಷಿಸಲಾಗಿದ್ದು, ಅಲ್ಲಿಯವರೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!