ಮುಳ್ಳು ಹಂದಿಯ ಶವ ಪತ್ತೆ-ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು
ಮಂಗಳೂರು, ಮಾ. 18: ಮಂಗಳೂರು ತಾಲೂಕಿನ ಮರಕಡ ಗ್ರಾಮದ ಅಳೆಮೊಗರು ಎಂಬಲ್ಲಿ ಅಕ್ರಮವಾಗಿ ಮುಳ್ಳು ಹಂದಿಗೆ ಉರುಳು ಹಾಕಿ ಬೇಟೆಯಾಡಿ ಮಾಂಸವಾಗಿ ಪರಿವರ್ತಿಸಲು ಸ್ವಚ್ಛಗೊಳಿಸುವ ಪ್ರಕರಣನ್ನು ವಲಯ ಅರಣ್ಯಾಧಿಕಾರಿ, ಮಂಗಳೂರು ವಲಯದ ನೇತೃತ್ವದ ತಂಡ ಪತ್ತೆ ಹಚ್ಚಿ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು, ಉರುಳು ತಂತಿಗೆ ಸಿಕ್ಕಿ ಸತ್ತಿದ್ದ ಮುಳ್ಳು ಹಂದಿಯ ಮೃತದೇಹವನ್ನು ಮತ್ತು ಉರುಳು ಹಾಕಲು ಬಳಸಿದ ಉರುಳು ತಂತಿ ಮತ್ತು ಮುಳ್ಳು ಹಂದಿಯ ಮುಳ್ಳುಗಳನ್ನು ಅಮಾನತುಪಡಿಸಿಕೊಳ್ಳಲಾಯಿತು.
ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಉಪ ವಲಯ ಅರಣ್ಯಾಧಿಕಾರಿ ಸಂಜು ಡಿ. ಲಮಾಣಿ, ಅರಣ್ಯ ರಕ್ಷಕರಾದ ವೀಣಾ ಮತ್ತು ಸೋಮನಿಂಗ ಹಿಪ್ಪರಗಿ ಹಾಗೂ ಅರಣ್ಯ ವೀಕ್ಷಕರಾದ ಶಿವಪ್ರಸಾದ್ ಭಾಗವಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಪರಾರಿಯಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಲನ್ ರವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.