ನಿಮಗೆ ಗೊತ್ತಾ ಇಲ್ಲೊಂದು ಕಡೆ ಟ್ರಕ್ ಚಲಾಯಿಸುವಾಗಲೂ ಹೆಲ್ಮೆಟ್ ಬೇಕಂತೆ….
ಗಂಜಾಂ: ದ್ವಿಚಕ್ರ ವಾಹನ ಸವಾರಿ ನಡೆಸೋವಾಗ ಹೆಲ್ಮೆಟ್ ಕಡ್ಡಾಯ, ಅದರಲ್ಲೂ ಸವಾರ ಮತ್ತು ಸಹಸವಾರರಿಬ್ಬರೂ ಹೆಲ್ಮೆಟ್ ಹೊಂದಿರಬೇಕು ಎಂಬ ನಿಯಮ ಸಡಿಲಗೊಂಡು ಸವಾರನಿಗೆ ಮಾತ್ರ ಹೆಲ್ಮೆಟ್ ಕಡ್ಡಾಯ ಮಾಡಿ ಸದ್ಯ ನಿಯಮ ಚಾಲ್ತಿಯಲ್ಲಿದೆ. ಒಂದು ವೇಳೆ ಹೆಲ್ಮೆಟ್ ಇಲ್ಲದೆ ಹೋದ್ರೆ, ದುರಾದೃಷ್ಟ ಕ್ಕೆ ಪೊಲೀಸರ ಕೈಗೆ ಸಿಕ್ಕಿಬಿದ್ರೆ ಫೈನ್ನ ಬರೆ ಕಟ್ಟಿಟ್ಟ ಬುತ್ತಿ. ಆದರೆ ನಿಮಗೆ ಗೊತ್ತಾ ಇಲ್ಲೊಂದು ಕಡೆ ಟ್ರಕ್ ಚಲಾಯಿಸುವಾಗಲೂ ಹೆಲ್ಮೆಟ್ ಬೇಕಂತೆ…. ಹೌದಾ…. ಅಂತ ಆಶ್ಚರ್ಯ ಆದ್ರೂ…, ಹೆಲ್ಮೆಟ್ ಧರಿಸದೆ ಟ್ರಕ್ ಚಾಲನೆ ಮಾಡಿದಕ್ಕೆ 1000 ರೂ ಫೈನ್ ಕಟ್ಟಿರುವ ಘಟನೆ ನಡೆದಿದೆ.
ಹೌದು, ಈ ಘಟನೆ ನಡೆದಿರೋದು ಒಡಿಶಾದ ಗಂಜಾಂ ಜಿಲ್ಲೆಯಲ್ಲಿ. ಹೆಲ್ಮೆಟ್ ಇಲ್ಲದೆ ಟ್ರಕ್ ಚಲಾಯಿಸಿದಕ್ಕೆ ಇಲ್ಲೊಬ್ಬರು ಫೈನ್ ಕೂಡಾ ಕಟ್ಟಿದ್ದಾರೆ. ಮಾ.14 ರಂದು ಪ್ರಮೋದ್ ಕುಮಾರ್ ಸ್ವೈನ್ ಎಂಬವರು ತಮ್ಮ ಟ್ರಕ್ನ ಲೈಸೆನ್ಸ್ ನ್ನು ನವೀಕರಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ ಟಿಓ) ಭೇಟಿ ನೀಡಿದ್ದಾರೆ. ಈ ವೇಳೆ ಪ್ರಮೋದ್ ಗೆ ತಮ್ಮ ಟ್ರಕ್ಗೆ ಸಂಬಂಧಿಸಿದಂತೆ ‘ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ’ ಎಂಬ ಒಂದು ಚಲನ್ ನೀಡಿದ್ದಾರಂತೆ. ಅಲ್ಲದೆ ಅಧಿಕಾರಿಗಳು ದಂಡ ಕಟ್ಟಿದ ಬಳಿಕವೇ ಪರವಾನಗಿಯನ್ನು ನವೀಕರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗುವುದು ಹೇಳಿದ್ದಾರಂತೆ. ಕೊನೆಗೆ ಬೇರೆ ದಾರಿ ಕಾಣದೇ ಪ್ರಮೋದ್ 1000 ರೂ. ದಂಡ ಪಾವತಿಸಿ ಪರವಾನಗಿ ನವೀಕರಣದ ಪತ್ರವನ್ನು ಪಡೆದುಕೊಂಡಿದ್ದಾರೆ.
ಇನ್ನೂ ಘಟನೆ ಬಗ್ಗೆ ಸ್ಥಳೀಯ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಕಳೆದ ಮೂರು ವರ್ಷಗಳಿಂದ ನಾನು ಟ್ರಕ್ ಚಾಲನೆ ಮಾಡುತ್ತಿದ್ದು, ನೀರನ್ನು ಪೂರೈಕೆ ಮಾಡಲು ವಾಹನದ ಬಳಕೆಯನ್ನು ಮಾಡಿಕೊಳ್ಳುತ್ತಿರುವೆ, ಟ್ರಕ್ನ ಪರವಾನಿಗೆ ಅವಧಿ ಮುಗಿದಿರುವುದರಿಂದ ನವೀಕರಣಕ್ಕಾಗಿ ಆರ್ ಟಿ.ಒ.ಗೆ ಹೋಗಿದ್ದೆ. ಆಗ ಹೆಲ್ಮೆಟ್ ಧರಿಸದೆ ಟ್ರಕ್ ನ್ನು ಚಾಲನೆ ಮಾಡಿರುವುದಕ್ಕೆ ದಂಡ ವಿಧಿಸಿರುವುದನ್ನ ನೋಡಿ ಆಶ್ಚರ್ಯ ಆಯ್ತು, ಇಲ್ಲಿ ಅನಗತ್ಯವಾಗಿ ಕಿರುಕುಳ ನೀಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ತಪ್ಪುಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.