ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಮಾ.20ರಂದು ಡಾ. ಸುಶೀಲಾ ಉಪಾಧ್ಯಾಯ ಸಂಸ್ಮರಣೆ
ಉಡುಪಿ, ಮಾ.17: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟ ಡಾ.ಕಾರಂತ ಪ್ರತಿಷ್ಠಾನದ ಸಹಕಾರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬ್ಯಾರಿ ಭಾಷಿಕರ ವರ್ಣನಾತ್ಮಕ ವ್ಯಾಕರಣ ಮತ್ತು ತೌಲನಕ ಅಧ್ಯಯನ ಗ್ರಂಥ ರಚಿಸಿ ಪಿಎಚ್ಡಿ ಪಡೆದ ಹಾಗೂ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯರು ಆಗಿದ್ದ ಡಾ.ಪಿ.ಸುಶೀಲ ಉಪಾಧ್ಯಾಯರವರ ಸಂಸ್ಮರಣಾ ಕಾರ್ಯಕ್ರಮವು ಮಾ.20ರಂದು ಅಪರಾಹ್ನ 2ಗಂಟೆಗೆ ಕೋಟ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಹಾಯಕ ಅಭಿಯೋಗ ನಿರ್ದೇಶಕಿ ಮಮ್ತಾಝ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿರುವರು. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಸುಶೀಲ ಉಪಾಧ್ಯಾಯರವರ ಸಂಸ್ಮರಣ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಡಾ. ಕಾರಂತ ಪ್ರತಿಷ್ಠಾನದ ಟ್ರಸ್ಟಿ ಇಬ್ರಾಹಿಂ ಕೋಟ, ಕಾರ್ಯದರ್ಶಿ ನರೇಂದ್ರ ಕೋಟ, ಕರ್ನಾಟಕ ಹಜ್ ಸಮಿತಿಯ ಮಾಜಿ ಸದಸ್ಯ ಸಲೀಂ ಅಂಬಾಗಿಲು ಭಾಗವಹಿಸಲಿರುವರು. ಸಂಜೆ 4 ಗಂಟೆಗೆ ಮಹಿಳಾ ಸಾಧಕಿಯರಾದ ಮಮ್ತಾಜ್(ಸಾಮಾಜಿಕ ಸ್ಪಂದನೆ), ಡಾ.ವಾರಿಜ ಎನ್.(ಶೈಕ್ಷಣಿಕ ಕ್ಷೇತ್ರ), ಸುಶೀಲ ಸೋಮಶೇಖರ್ (ಸಂಘಟನೆ), ಡಾ.ಫಿರ್ದೋಸ್(ಶೈಕ್ಷಣಿಕ ಕ್ಷೇತ್ರ), ಡಾ.ಅಪ್ಸರಿ ಬಾನು ಎಂ. (ವೈದ್ಯಕೀಯ ಕ್ಷೇತ್ರ), ಮೀನಾ ಪಿಂಟೊ ಕಲ್ಯಾಣಪುರ(ಸಮಾಜ ಸೇವೆ), ಫರ್ಝಾನ ಎಂ.(ಸಾಮಾಜಿಕ ಸ್ಪಂದನೆ), ಲಲಿತಾ ಪೂಜಾರಿ ಕೊರವಡಿ (ಕರಕುಶಲ ಕಲೆ), ಸುಜಾತಾ ಅಂದ್ರಾದೆ(ಸಿನಿಮಾ, ರಂಗಭೂಮಿ ನಟಿ), ಶೈಲಾ ಎಸ್.ಪೂಜಾರಿ (ಸಾಮಾಜಿಕ ಸ್ಪಂದನೆ), ಮಂಜುಶ್ರೀ ರಾಕೇಶ್ ಕಟಪಾಡಿ (ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಸೇವೆ) ಅವರಿಗೆ ಅಭಿನಂದನಾ ಸಮಾರಂಭ ವನ್ನು ಆಯೋಜಿಸಲಾಗಿದೆ.
ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಾಧಕಿಯರನ್ನು ಸನ್ಮಾನಿಸಲಿರುವರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಬಹು ಮಾನ ವಿತರಣೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬಳಿಕ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಲಿದೆ.
ಮೆಹಂದಿ ಸ್ಪರ್ಧೆಯು ಅರಬಿಕ್ ಮತ್ತು ಭಾರತೀಯ ಶೈಲಿ ಎರಡು ವಿಭಾಗದಲ್ಲಿ ನಡೆಯಲಿದೆ. ಈ ಸ್ಪರ್ಧಾ ವಿಜೇತರಿಗೆ ಪ್ರತ್ಯೇಕವಾಗಿ ಪ್ರಥಮ 3,000 ರೂ., ದ್ವಿತೀಯ 2,000ರೂ., ತೃತೀಯ 1,000ರೂ. ಹಾಗೂ ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಪ್ರಥಮ 1,000ರೂ., ದ್ವಿತೀಯ 500ರೂ. ನಗದು ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಮಾ.19ರೊಳಗೆ ದೂರವಾಣಿ ಸಂಖ್ಯೆ 7829729340, 7483946578 ನೊಂದಾವಣೆ ಮಾಡಿಕೊಳ್ಳಬೇಕು. ಕಾರ್ಯಕ್ರಮವನ್ನು ಅಕಾಡೆಮಿ ಮತ್ತು ಥೀಂ ಪಾರ್ಕ್ ಯೂಟುಬ್ ಚಾನಲ್ ಹಾಗೂ ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಲಾಗು ವುದು ಎಂದು ಪೂರ್ಣಿಮ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ನಝೀರ್ ಪೊಲ್ಯ ಉಪಸ್ಥಿತರಿದ್ದರು.