ತೆಂಕನಿಡಿಯೂರು: ಮುಖ್ಯದ್ವಾರ ಬದಲಾವಣೆ ಪ್ರಶ್ನಿಸಿದ ಪಂ. ಸದಸ್ಯರ, ಗ್ರಾಮಸ್ಥರ ಮೇಲೆ ಜಾತಿ ನಿಂದನೆ ದೂರು
ಉಡುಪಿ(ಉಡುಪಿ ಟೈಮ್ಸ್ ವರದಿ): ತೆಂಕನಿಡಿಯೂರು ಗ್ರಾಮ ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೇ ಪಂಚಾಯತ್ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿದ್ದು ಇದನ್ನು ಪ್ರಶ್ನಿಸಿದ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು, ಇದನ್ನು ಖಂಡಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಮಾಹಿತಿ ನೀಡಿದ ಪಂಚಾಯತ್ ಸದಸ್ಯ ಪ್ರಖ್ಯಾತ್ ಶೆಟ್ಟಿ ಅವರು ಗ್ರಾಮನ ಮುಖ್ಯ ದ್ವಾರವನ್ನು ಬದಲಿಸಿರುವ ಬಗ್ಗೆ ಮನವಿ ನೀಡಲು ಬಂದ 4 ಮಂದಿ ಸದಸ್ಯರ ವಿರುದ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಉದ್ದೇಶವೇನು? ಅಲ್ಲದೇ ತಮ್ಮ ಸಮಸ್ಯೆಯ ಬಗ್ಗೆ ದೂರು ನೀಡಲು ಬಂದ ಗ್ರಾಮಸ್ಥರಿಗೂ ಸಹ ಪಂಚಾಯತ್ ಅಧ್ಯಕ್ಷರು ಹೊರಗೆ ಹೋಗಲು ಹೇಳಿದ್ದು ಅವರ ವಿರುದ್ಧ ಕೂಡ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
ಇದರ ಹಿಂದೆ ಕೆಲವೊಂದು ಕಾಣದ ಕೈಗಳ ಕೈವಾಡ ಕೂಡ ಇದ್ದು, ಶಾಂತಿಯುತವಾಗಿದ್ದ ತೆಂಕನಿಡಿಯೂರು ಗ್ರಾಮ ಪಂಚಾಯತ್‍ನ್ನು ಅಶಾಂತಿಯ ಗೂಡಾಗಿ ಪರಿವರ್ತಿಸಲು ಬಿಜೆಪಿ ಬೆಂಬಲಿತ ಆಡಳಿತ ಹೊರಟಿದ್ದು ಇದರ ವಿರುದ್ಧ ಸಂಘಟಿತ ಹೋರಾಟ ಮುಂದುವರೆಸಲಾಗುವುದು ಎಂದಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಸದಸ್ಯರು ಪಂಚಾಯತ್‍ನಲ್ಲಿ ನಡೆದ ತಪ್ಪನ್ನು ಪ್ರಶ್ನಿಸಿದ್ದಕ್ಕೆ ಸೂಕ್ತ ಉತ್ತರ ನೀಡದೇ ಉಡಾಫೆಯ ವರ್ತನೆಯನ್ನು ಬಿಜೆಪಿ ಬೆಂಬಲಿತ ಅಧ್ಯಕ್ಷರು ನಡೆಸಿಕೊಂಡು ಬಂದಿದ್ದಾರೆ. ನೂತನ ಪಂಚಾಯತ್ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ಸಾಮಾನ್ಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಎಲ್ಲಿಯೂ ಕೂಡ ಪಂಚಾಯತ್‍ನ ಮುಖ್ಯ ದ್ವಾರವನ್ನು ಬದಲಿಸುವ ಕುರಿತು ವಿಷಯ ಪ್ರಸ್ತಾಪವಾಗಿಲ್ಲ.
ಸಾಮಾನ್ಯ ಸಭೆಯಲ್ಲಿ ನಿರ್ಣಯಿಸದೆ ಇದ್ದರೂ ಮಾರ್ಚ್ 13, ಮತ್ತು 14 ರಂದು ಸರಕಾರಿ ರಜಾ ದಿನದ ಸಮಯದಲ್ಲಿ ಹಲವು ವರ್ಷಗಳಿಂದ ಇದ್ದ ಪಂಚಾಯತ್‍ನ ಮುಖ್ಯ ದ್ವಾರವನ್ನು ತೆಗೆದು ಕೆಂಪು ಕಲ್ಲು ಕಟ್ಟಿರುವುದು ಖಂಡನೀಯ. ಪಂಚಾಯತ್ ವ್ಯವಸ್ಥೆ ಪಾರದರ್ಶಕವಾಗಿರಬೇಕಾಗಿದ್ದು ರಸ್ತೆಯ ಬದಿಗಿದ್ದು ಜನರಿಗೆ ಸುಗಮವಾಗಿ ಪವೇಶಿಸಲು ಮುಖ್ಯದ್ವಾರವನ್ನು ತೆಗೆದು ಒಂದು ಮೂಲೆಯಲ್ಲಿ ಜನರಿಗೆ ನಡೆದಾಡಲು ಕೂಡ ಸಾಧ್ಯವಾಗದ ರೀತಿಯಲ್ಲಿ ಮುಖ್ಯದ್ವಾರವನ್ನು ನಿರ್ಮಿಸಿರುವ ಪಂಚಾಯತ್ ಬಿಜೆಪಿ ಆಡಳಿತ ಜನರಿಗೆ ತೊಂದರೆ ಮಾಡಲು ಹೊರಟಿದೆ.
ಇದರ ಬಗ್ಗೆ ಈಗಾಗಲೇ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಸಾರ್ವಜನಿಕವಾಗಿರುವ ಪಂಚಾಯತ್‍ನ ಈ ಕಾಮಗಾರಿಯ ಬಗ್ಗೆ ಅನುಮಾನವಿದ್ದು, ಇದರ ಹಿಂದೆ ಇರುವ ವ್ಯಕ್ತಿಗಳು ಯಾರೇ ಇದ್ದರೂ ಕೂಡ ಅದನ್ನು ಹಿಂದೆ ಇದ್ದ ಹಾಗೆ ಮಾಡಿಸಿಕೊಡಬೇಕು. ನಮಗೆ ಲಭಿಸಿರುವ ಮಾಹಿತಿಗಳ ಪ್ರಕಾರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕೂರುವ ಕುರ್ಚಿ ಸದ್ಯ ವಾಸ್ತು ಪ್ರಕಾರವಾಗಿ ಇಲ್ಲವಾಗಿದ್ದು ಅದಕ್ಕಾಗಿ ಪಂಚಾಯತ್‍ನ ಮುಖ್ಯ ದ್ವಾರವನ್ನೇ ಬದಲಿಸಲಾಗಿದೆ ಎಂಬ ಗುಮಾನಿ ಇದೆ.
ಪಂಚಾಯತ್ ಆಡಳಿತ ಈವರಗೆ ಸಾಂಗವಾಗಿ ನಡೆದಿದೆ. ಯಾವುದೇ ರೀತಿಯ ಸಮಸ್ಯೆ ಯಾವುದೇ ಆಧ್ಯಕ್ಷರುಗಳಿಗೆ ಆಗಿಲ್ಲ. ಆದರೆ ಕಳೆದ ಆರು ವರ್ಷಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಸಮಿತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೂಡ ನಡೆಯದ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಈ ಬಗ್ಗೆ ಪಂಚಾಯತ್ ಆಡಳಿತ ಸಂಪೂರ್ಣ ನಿರ್ಲಕ್ಷ್ಯತನ ತೋರುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ಮಾಡಲಾಗುವುದು ಎಂದಿದ್ದಾರೆ. ಮಾಜಿ ನಗರಾಭಿವದ್ಧಿ ಪ್ರಾಧಿಕಾರ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಯತೀಶ್ ಕರ್ಕೇರ, ಶರತ್ ಶೆಟ್ಟಿ, ಅನುಷಾ ಆಚಾರ್ಯ ಉಪಸ್ಥಿತರಿದ್ದರು.