ಮಂಗಳೂರು: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ -ಸುಳ್ಳು ದೂರು ಎಂದ ವಕೀಲ

ಮಂಗಳೂರು : ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ವಕೀಲರೊಬ್ಬರ ವಿರುದ್ದ ದೂರು ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿ ಇದೀಗ ವಕೀಲ ಪ್ರವೀಣ್ ಪಿಂಟೋ ಅವರು ತನ್ನ ವಿರುದ್ಧ ಪೊಲೀಸರು ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದ್ದಾರೆ.

ಘಟನೆಗೆ ಸಂಬಂಧಿಸಿ ದೂರು ದಾಖಲಾದ ಕೆಲವೇ ಗಂಟೆಗಳ ನಂತರ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ಬೆಳಿಗ್ಗೆ 10.30 ರ ಸುಮಾರಿಗೆ ನನ್ನ ಕಕ್ಷಿದಾರರ ಮನೆಗೆ ಸುಮಾರು 8 ಪೊಲೀಸರು ಪ್ರವೇಶಿಸಿದ್ದಾರೆ ಎಂದು ನನಗೆ ಕರೆ ಬಂತು. ಫೋನ್ ಅನ್ನು ಪೊಲೀಸರಿಗೆ ಹಸ್ತಾಂತರಿಸುವಂತೆ ನಾನು ನನ್ನ ಕಕ್ಷಿದಾರರಿಗೆ ತಿಳಿಸಿದೆ. ಫೋನ್‍ನಲ್ಲಿ ಮಾತನಾಡುತ್ತಾ, ಪೊಲೀಸರು ಹೇಳಿದರು ಅವರು ಮಹಜರಿಗಾಗಿ ಬಂದಿದ್ದಾರೆಂದು.

ಮಹಜರು ನಡೆಸಲು ಪೊಲೀಸರಿಗೆ ಅವಕಾಶ ನೀಡುವಂತೆ ನಾನು ನನ್ನ ಕಕ್ಷಿದಾರರಿಗೆ ತಿಳಿಸಿದೆ. ನಂತರ ಬೆಳಿಗ್ಗೆ 11.15 ರ ಸುಮಾರಿಗೆ ನನ್ನ ಕಕ್ಷಿದಾರರಿಂದ ಮತ್ತೆ ಕರೆ ಬಂತು. ಅಲ್ಲಿಯವರೆಗೆ ಪೊಲೀಸರು ಮನೆಯೊಳಗೆ ಇದ್ದರು. ಅವರ ಎಲ್ಲಾ ಚಟುವಟಿಕೆಗಳನ್ನು ಮನೆಯೊಳಗೆ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾನು ಹಾಗೂ ನನ್ನ ಕಕ್ಷಿದಾರರು ಪೊಲೀಸರಿಗೆ ಅಡ್ಡಿಪಡಿಸಿದ್ದೇನೆ ಎಂದು ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ

“ನಾನು ನ್ಯಾಯಾಲಯದಿಂದ ನನ್ನ ಕಕ್ಷಿದಾರರ ಅಪಾರ್ಟ್‍ಮೆಂಟ್‍ಗೆ ಮರಳಿದೆ. ಪೊಲೀಸರು ಯಾವುದೇ ಎಫ್‍ಐಆರ್ ನೋಂದಾಯಿಸದೆ ಮಹಜರು ನಡೆಸಿದ್ದಾರೆ. ಎಫ್‍ಐಆರ್ ನೋಂದಾಯಿಸಿದ ನಂತರವೇ ಅವರು ಮಹಜರು ನಡೆಸಬೇಕು. ನಾನು ಅವರನ್ನು ಎಫ್‍ಐಆರ್ ಸಂಖ್ಯೆಯನ್ನು ಕೇಳಿದಾಗ, ಪೊಲೀಸ್ ಮಾತನಾಡಲು ಸಿದ್ದವಿರಲಿಲ್ಲ. ಅದು ಬಿಟ್ಟು ಮಹಿಳಾ ಪೊಲೀಸ್ ಇನ್ಸ್‍ಪೆಕ್ಟರ್ ಏರು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು.  ನಾನು ಬಳಿಕ ಅಪಾರ್ಟ್‍ಮೆಂಟ್‍ನ ಕೆಳಭಾಗದಲ್ಲಿ ಪೊಲೀಸರನ್ನು ಭೇಟಿಯಾದೆ. ನನ್ನ ಕಕ್ಷಿದಾರರ ಮನೆ ನಾಲ್ಕನೇ ಮಹಡಿಯಲ್ಲಿದೆ. ಪೊಲೀಸರು ಮಹಜರು ನಡೆಸಿದ ಬಳಿಕ ನಾನು ಪೊಲೀಸರೊಂದಿಗೆ ಮಾತನಾಡಿದೆ. ನನ್ನ ಕಕ್ಷಿದಾರರು ಮಹಜರಿಗೆ ಸಹಕಾರ ನೀಡಿಲ್ಲವೆಂದು ಅವರು ಬರೆಯುತ್ತಿದ್ದರು. ನಾನು ಸೇರಿದಂತೆ ನಾಲ್ಕು ಮಂದಿ ಅವರನ್ನು ತಡೆದಿದ್ದೇನೆ ಎಂದು ಅವರು ಬರೆಯುತ್ತಿದ್ದರು. ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!