ಕೊರೊನಾ ಎರಡನೇ ಅಲೆ ಪ್ರಾರಂಭ, ನಿಯಮ ಪಾಲಿಸದಿದ್ದರೆ ದಂಡದ ಜೊತೆಗೆ ಪ್ರಕರಣ ದಾಖಲು: ಜಿಲ್ಲಾಧಿಕಾರಿ ಎಚ್ಚರಿಕೆ
ಉಡುಪಿ ಮಾ.16: ಕೋವಿಡ್ ಎರಡನೇ ಅಲೆಯು ಪ್ರಾರಂಭವಾಗಿದ್ದು, ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಜೊತೆಗೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಅವರು ಮಂಗಳವಾರ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ, ಎರಡನೇ ಹಂತದ ಕೋವಿಡ್ ಲಸಿಕೆ ಪಡೆದು ಮಾತನಾಡಿದರು. ಸಾರ್ವಜನಿಕರು ಜಾಗೃತರಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಪಿಂಗ್ ಮಾಲ್ಗಳಲ್ಲಿ, ಅಂಗಡಿಗಳಿಗೆ ತೆರಳುವ ಗ್ರಾಹಕರು
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೆ ಅಂಗಡಿಗೆ ಬರುವ ಸಾರ್ವಜನಿಕರ ಪ್ರವೇಶವನ್ನು ಅಂಗಡಿ ಮಾಲೀಕರು ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿ ಮಾಲೀಕರ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ
ಜಿ ಜಗದೀಶ್ ಹೇಳಿದರು.
ಕೇರಳ ಮತ್ತು ಮಹಾರಾಷ್ಟç ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರು 72 ಗಂಟೆಯ ಮೊದಲಿನ ಕೊರೊನಾದ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಬೇಕು. ಹೊರ ರಾಜ್ಯಗಳಿಂದ ನೆಗೆಟಿವ್ ವರದಿಯನ್ನು ತಾರದೆ ಬಂದವರ ಬಗ್ಗೆ ಸಾರ್ವಜನಿಕರು
ತಕ್ಷಣ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಅವರಿಗೆ ತಕ್ಷಣ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ರಿಂದ 59 ವರ್ಷದೊಳಗಿನ ಇತರೆ ಕಾಯಿಲೆಗಳಿಂದ ಬಳುತ್ತಿರುವವರು ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಲಸಿಕೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಮುಂಚೂಣಿ ಕಾರ್ಯಕರ್ತರು ಲಸಿಕೆಯನ್ನು ಪಡೆದುಕೊಳ್ಳುವುದರಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಹಿರಿಯ ನಾಗರಿಕರು ಕೊರೊನಾ ಲಸಿಕೆಯನ್ನು ಪಡೆದುಕೊಳ್ಳುವುದರಲ್ಲಿ 6 ನೇ ಸ್ಥಾನದಲ್ಲಿದೆ. ಈಗಾಗಲೇ ಜಿಲ್ಲೆಯ 17,000 ಕ್ಕೂ ಅಧಿಕ ಹಿರಿಯ ನಾಗರಿಕರು ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆಯನ್ನು
ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕೋವಿಡ್-19 ಲಸಿಕೆಯನ್ನು ಪಡೆಯಲು ಬಂದರೆ ಹೆಚ್ಚು ಔಷಧಿ ಕೇಂದ್ರಗಳನ್ನು ರಚಿಸಿ ಲಸಿಕೆಯನ್ನು ನೀಡಲಾಗುವುದು ಎಂದು ಡಿಸಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಹ ಎರಡನೇ ಹಂತದ ಕೋವಿಡ್ ಲಸಿಕೆ ಪಡೆದರು. ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಲಸಿಕ ಅಧಿಕಾರಿ ಡಾ. ಎಂ.ಜಿ.ರಾಮ, ಕೋವಿಡ್ ವಿಶೇಷ ನೋಡೆಲ್ ಅಧಿಕಾರಿ ಡಾ. ಪ್ರೇಮಾನಂದ್ ಮತ್ತಿತರರು ಉಪಸ್ಥಿತರಿದ್ದರು.