ತೆಂಕನಿಡಿಯೂರು: ವಾಸ್ತು ದೋಷ – ಪಂಚಾಯತ್ ಮುಖ್ಯದ್ವಾರವೇ ಬಂದ್? ಸದಸ್ಯರ ನಡುವೆ ವಾಕ್ ಸಮರ!

ಉಡುಪಿ(ಉಡುಪಿ ಟೈಮ್ಸ್ ವರದಿ): ತೆಂಕನಿಡಿಯೂರು ಗ್ರಾಮಪಂಚಾಯತ್‍ನಲ್ಲಿ ನವೀಕರಣ ಕಾರ್ಯ ಕೈಗೊಂಡ ವಿಚಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್‍ನ ಎದುರು ನಡೆದ ಪ್ರತಿಭಟನೆಯಲ್ಲಿ ಸದಸ್ಯರ ನಡುವೆ ವಾಕ್ ಸಮರ ನಡೆಯಿತು.

ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸುವ ಪ್ರವೇಶ ದ್ವಾರವನ್ನು ತೆರವುಗೊಳಿಸಿ ಬೇರೆ ಕಡೆಯಲ್ಲಿ ಪ್ರವೇಶ ದ್ವಾರ ನಿರ್ಮಿಸುವ ವಿಚಾರದಲ್ಲಿ ಈ ವಾಗ್ವಾದ ಆರಂಭವಾಗಿದ್ದು. ಗ್ರಾಮ ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ಅಂಗೀಕಾರಗೊಳಿಸದೆಯೇ ಈ ನವೀಕರಣ ಕಾರ್ಯ ಆರಂಭಿಸಿರುವುದು ವಿರೋಧಕ್ಕೆ ಕಾರಣವಾಗಿದೆ. ಪ್ರಖ್ಯಾತ್ ಶೆಟ್ಟಿ ನೇತೃತ್ವದ ಕಾಂಗ್ರೆಸ್ ಸದಸ್ಯರು ಪಂಚಾಯತ್ ಅಧ್ಯಕ್ಷರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ಬಂದಿದ್ದು ಈ ಸಂದರ್ಭದಲ್ಲಿ ಮಾತುಕತೆ ಭುಗಿಲೆದಿತ್ತು. ಕಾಂಗ್ರೆಸ್ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ವೇಳೆ ಸದಸ್ಯರ ಗಮನಕ್ಕೆ ತಾರದೆ ಏಕಾಏಕಿ ಮುಖ್ಯದ್ವಾರ ತೆರವುಗೊಳಿಸಿದ್ದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿರುದ್ಧ ಸದಸ್ಯರ ಆಕ್ರೋಶ ವ್ಯಕ್ತ ಪಡಿಸಿದ ಸದಸ್ಯರು, ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳದೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸದಸ್ಯರಿಗೆ ಮಾತ್ರವಲ್ಲದೆ ಗ್ರಾಮಸ್ಥರಿಗೂ ಪಂಚಾಯತ್ ಮುಖ್ಯದ್ವಾರ ಎಲ್ಲಿದೆ ಎಂದು ತಿಳಿಯುತ್ತಿಲ್ಲ. ನೂತನ ಪ್ರವೇಶ ದ್ವಾರವನ್ನು ಶೀಘ್ರ ತೆರವುಗೊಳಿಸಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಎಚ್ಚರಿಕೆ ನೀಡಿದರು.

ಮುಖ್ಯದ್ವಾರ ತೆರವುಗೊಳಿಸಿದ ಬಗ್ಗೆ ಸಮಾಜಾಯಿಸಿ ನೀಡುವಾಗ ಪಂಚಾಯತ್ ಉಪಾಧ್ಯಕ್ಷ ಈ ಮುಖ್ಯದ್ವಾರದಿಂದ ವಾಸ್ತು ದೋಷ ಇರುವ ಬಗ್ಗೆ ತಿಳಿದು ಬಂದಿರುವ ಕಾರಣ ಇದನ್ನು ತೆರವುಗೊಳಿಸಿ, ಬೇರೆಡೆ ಮುಖ್ಯ ದ್ವಾರ ಮಾಡಲಾಗುವುದೆಂದರು. ಈ ಹೇಳಿಕೆಯಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಗ್ರಾಮಸ್ಥರು ಅಧ್ಯಕ್ಷ ಉಪಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಅವರು ಪ್ರತಿಕ್ರಿಯೆ ನೀಡಿ, ”ಸಾಮಾನ್ಯ ಕಾರ್ಯ ಸಭೆಯಲ್ಲಿ ಅಂಗೀಕರಿಸಲ್ಪಟ್ಟರು, ಇಲ್ಲದಿದ್ದರೂ ನಮಗೆ ಬಹುಮತ ಇರುವುದರಿಂದ, ಯಾವುದೇ ಹೊಸ ಕಾರ್ಯಗಳನ್ನು ಮಾಡಿಸಲು ನಮಗೆ ಅನುಮತಿ ಇದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ನಾವು ಯೋಚಿಸಿದ್ದೆವು. ಪ್ರವೇಶ ದ್ವಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದರಿಂದ ಮತ್ತು ಸಾರ್ವಜನಿಕರ ಕೋರಿಕೆಯಂತೆ ಹಾಗೂ ನಾವು ಯೋಜಿಸಿದ್ದ ಭವಿಷ್ಯದ ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ಪಂಚಾಯತ್ ಕಚೇರಿಗೆ ಪ್ರವೇಶಿಸುವಲ್ಲಿರುವ ಮುಖ್ಯ ಬಾಗಿಲನ್ನು ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಈ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಗಳನ್ನಾಗಿ ಮಾಡುವ ಯೋಜನೆ ನಮ್ಮಲ್ಲಿದೆ” ಎಂದು ಹೇಳಿದ್ದಾರೆ.

ಈ ಸಂದರ್ಭ ತೆಂಕನಿಡಿಯೂರು ಗ್ರಾಮ ಪಂಚಯಾತ್ ಅಧ್ಯಕ್ಷ , ಉಪಾಧ್ಯಕ್ಷ, ಬಿಜೆಪಿ ಬೆಂಬಲಿತ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯ ಶರತ್ ಕುಮಾರ್, ಧನಂಜಯ, ಯತೀಶ್ ಕರ್ಕೇರಾ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ , ಉಪಾಧ್ಯಕ್ಷರು ಇದ್ದರು.

Leave a Reply

Your email address will not be published. Required fields are marked *

error: Content is protected !!