ಪೌರ ಕಾರ್ಮಿಕರಿಗೆ ಹಲ್ಲೆ: ನಗರ ಸಭೆಯ ಎದುರು ದಸಂಸ ಪ್ರತಿಭಟನೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಸಿಟಿ ಬಸ್ ನಿಲ್ದಾಣದ ಬಳಿ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರ ಕಸ ವಿಲೇವಾರಿಗೆ ಸಂಬಂಧಿಸಿ ಪೌರ ಕಾರ್ಮಿಕರೊಬ್ಬರ ಮೇಲೆ ನಡೆದ ಹಲ್ಲೆ ವಿರೋಧಿಸಿ ಹಾಗೂ ನಗರ ಸಭೆಯ ದುರಾಡಳಿತದ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ನಗರ ಸಭೆಯ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಶ್ಯಾಮರಾಜ್ ಬಿರ್ತಿ ಅವರು, ಸಮಾಜದಲ್ಲಿ ಪೌರ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಈಗ ಆಡಳಿತದಲ್ಲಿರುವ ನಗರಸಭೆಯ ಸದಸ್ಯರು ತಮಗೆ ಬೇಕಾದಂತೆ ಗುತ್ತಿಗೆ ಪಡೆದು ಲಾಭ ಪಡೆಯುತಿದ್ದರೆ. ಇದರಿಂದ ಪೌರ ಕಾರ್ಮಿಕರು ಸಮಸ್ಯೆಗೀಡಾಗುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ, ಸುಂದರ್ ಮಾಸ್ತರ್ ಅವರು ಮಾತನಾಡಿ, ನಗರಸಭೆಯಲ್ಲಿ ಪರಿಶಿಷ್ಟ ಪಂಗಡದವರ ಹೆಸರಿನಲ್ಲಿ ಆರೋಗ್ಯ ಕಾರ್ಡ್ ಮಾಡಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆಯಲಾಗುತ್ತಿದೆ. ಮೀಸಲಾತಿಯಲ್ಲಿ ದಲಿತರಿಗೆ ಅನ್ಯಾಯಮಾಡಲಾಗುತ್ತಿದೆ. ಆರ್ ಟಿಐಯಲ್ಲಿ ದಾಖಲಾತಿ ಪಡೆದು ಲೋಕಾಯುಕ್ತರಿಂದ ತನಿಖೆಗೆ ಪ್ರಕರಣ ದಾಖಲಿಸಲಾಗಿದ್ದು ಲೋಕಾಯುಕ್ತರ ವರದಿಯಲ್ಲಿ ಇದು ಉಲ್ಲೇಖಿತವಾಗಿದೆ ಎಂದರು.

 ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಾಗ ನಗರ ಸಭೆಯ ಪೌರಾಯುಕ್ತರು ನಿರ್ಲಕ್ಷ್ಯ ತೋರಿದ್ದಾರೆ. ಈ ಪ್ರಕರಣದಲ್ಲಿ ದೂರು ಕೊಡಲು ವಿಳಂಬ ನೀತಿಯನ್ನು ಅನುಸರಿಸಲಾಗಿದೆ ಎಂದ ಅವರು, ಇಂತಹ ಸಂದರ್ಭಗಳಲ್ಲಿ ಆಡಳಿತ ಪಕ್ಷದ ಒಬ್ಬನೇ ಒಬ್ಬ ನಗರಸಭೆಯ ಸದಸ್ಯರು ಇರಲಿಲ್ಲವೆಂಬುದು ನಾಚಿಕೆಗೇಡಿನ ವಿಚಾರ. ಶಾಸಕ ರಘುಪತಿ ಭಟ್ ಎಲ್ಲವೂ ಮಾಡಿದೆ ಎನ್ನುತ್ತಾರೆ. ಸಂಘಟನೆಯ ಕುರಿತು ತುಚ್ಚವಾಗಿ ಮಾತನಾಡುತ್ತಾರೆ.

ಇನ್ನು ಹಲ್ಲೆಕೋರರ ಜಾತಿ ನೋಡಿ, ಪಕ್ಷ ನೋಡಿ ಬಿಜೆಪಿ ಖಂಡಿಸುತ್ತದೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರವೀಣ್ ಪೂಜಾರಿ ಹತ್ಯೆಯನ್ನು ಇವರದ್ದೆ ಕಾರ್ಯಕರ್ತರು ಕೊಂದಾಗ ಯಾಕೆ ಸುಮ್ಮನಿತ್ತು ಎಂದು ಪ್ರಶ್ನಿಸಿದರು.

 ಸಂಘಟನೆಯ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ ಅವರು, ನಾವು ಅನ್ಯಾಯವಾದಾಗ ದಾರಿಯಲ್ಲೆ ಪ್ರತಿಭಟಿಸುವವರು ಎಂದು ಸಂಘಟನೆಯ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ನಗರ ಸಭಾ ಅಧ್ಯಕ್ಷರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.  

ಇದೇ ವೇಳೆ ಪ್ರಕರಣವನ್ನು ಖಂಡಿಸಿ ಹಾಗೂ ನಗರಸಭೆಯ ದುರಾಡಳಿತವನ್ನು ಸರಿಪಡಿಸಲು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಲಾಯಿತು. ಇಂದು ಜಿಲ್ಲಾಧಿಕಾರಿಗಳಿಗೆ ಸಲ್ಲಸಿದ ಮನವಿಯ ಬೇಡಿಕೆಗಳು ಹೀಗಿವೆ:-
ಬೇಡಿಕೆಗಳು:

1) ಪೌರಕಾರ್ಮಿಕರ ಭದ್ರತೆಗೆ ನಗರಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕು.

2) ಪೌರಕಾರ್ಮಿಕರಿಗೆ ಈಗಿನ ಬೆಲೆ ಏರಿಕೆಗೆ ತಕ್ಕಂತೆ ವೇತನ ನೀಡಬೇಕು,

3) ಪೌರಕಾರ್ಮಿಕರಿಗೆ ಪಿ.ಎಫ್. ಆರೋಗ್ಯ ತಪಾಸಣೆ, ಸಮವಸ್ತ್ರ, ಶೂ, ಕೈಗವಸು ಇತ್ಯಾದಿಗಳನ್ನು ಉಚಿತವಾಗಿ ನೀಡಬೇಕು.

4) ನಷ್ಟದಲ್ಲಿರುವ ಮಹಿಳಾ ಸ್ವಸಹಾಯ ಗುಂಪುಗಳಾದ ಸುಂದರಿ ಪುತ್ತೂರು ಮತ್ತು ಆಶಾ ರವರಿಗೆ ಸೂಕ್ತ ನ್ಯಾಯ ಒದಗಿಸಬೇಕು.

5) ನಗರಸಭಾ ಸದಸ್ಯರ ಅಡಿಯಲ್ಲಿ ನಡೆಯುವ ಕಸವಿಲೇವಾರಿಯನ್ನು ಕೈಬಿಟ್ಟು ಸ್ವಸಹಾಯ ಗುಂಪುಗಳಿಗೆ ನೀಡಬೇಕು.

6) ಪರಿಶಿಷ್ಟ ಜಾತಿಯ ಮೀಸಲು ನಿಧಿಯ ಹಣವನ್ನು ಹೊಸದಾಗಿ ನಿರ್ಮಿಸುವ ಪ್ರಧಾನಮಂತ್ರಿ ಆವಾಜ್ ಯೋಜನೆಗಳಿಗೆ ಬಳಸಬೇಕು.

7) ಸರಕಾರವೇ ಒದಗಿಸಿರುವ ವಾಹನಗಳ ನಿರ್ವಹಿಸುವಾಗ ಸ್ವಸಹಾಯ ಗುಂಪುಗಳೇ ಮಾಡುತ್ತಿರುವುದರಿಂದ ವಾಹನಕ್ಕೆ ಪ್ರತಿ ತಿಂಗಳು ನಗರಸಭೆಗೆ ಪಾವತಿಸಬೇಕಾದ ರೂ.5,000 ವನ್ನು ಕೈಬಿಡಬೇಕು,

8) ಭ್ರಷ್ಟಾಚಾರವೆಸಗಿರುವ ನಗರಸಭೆಯ ಆರೋಗ್ಯಾಧಿಕಾರಿ ಕರುಣಾಕರ ಇವರನ್ನು ಕೂಡಲೆ ವರ್ಗಾವಣೆ ಮಾಡಬೇಕು.

ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ  ಹುಸೇನ್ ಕೋಡಿಬೆಂಗ್ರೆ, ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಜನಾರ್ಧನ್ ಭಂಡಾರ್ಕರ್, ಗಣೇಶ್ ನೇರ್ಗಿ, ಜ್ಯೋತಿ ಹೆಬ್ಬಾರ್, ರಂಝಾನ್ ಕಾಪು, ಪ್ರೇಮಾನಂದ, ಪ್ರಶಾಂತ್, ಶಂಕರ್ ದಾಸ್, ಎಸ್.ಐ.ಓ ನ ಅಫ್ವಾನ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ನ ಇಫ್ತಿಕಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!