ಸೌದಿ ಅರೇಬಿಯಾ: ಮಾ.14 ರಿಂದ ನೂತನ ಕಾರ್ಮಿಕ ನೀತಿ ಜಾರಿ
ಸೌದಿ ಅರೇಬಿಯಾ: ಇಲ್ಲಿನ ವಿದೇಶಿ ಕಾರ್ಮಿಕರು ಕಾತರದಿಂದ ನಿರೀಕ್ಷಿಸುತ್ತಿದ್ದ ಹೊಸ ಕಾರ್ಮಿಕ ನೀತಿ ಕೊನೆಗೂ ಜಾರಿಗೆ ಬಂದಿದೆ. ಹೊಸ ಕಾರ್ಮಿಕ ನೀತಿಯು ಸೌದಿ ಅರೇಬಿಯಾದಲ್ಲಿ ಮಾ. 14 ರಿಂದ ಜಾರಿಗೆ ಬಂದಿದ್ದು, ಹೊಸ ನೀತಿಯ ಪ್ರಕಾರ ವಿದೇಶಿ ಕಾರ್ಮಿಕರು ತಮ್ಮ ಉದ್ಯೋಗದಾತನ ಅನುಮತಿಯ ವಿನಹ ರೀ ಎಂಟ್ರಿ ಎಕ್ಸಿಟ್ ಅಥವಾ ಫೈನಲ್ ಎಕ್ಸಿಟ್ ನಲ್ಲಿ ತಮ್ಮ ತಾಯ್ನಾಡಿಗೆ ತೆರಳಬಹುದಾಗಿದೆ.
ಅಷ್ಟೇ ಅಲ್ಲದೆ, ಸ್ಪೋನ್ಸರ್ ನ ಅನುಮತಿಯಿಲ್ಲದೇ ತಮ್ಮ ಉದ್ಯೋಗ ಹಾಗೂ ಉದ್ಯೋಗದಾತನನ್ನು ಬದಲಾಯಿಸಬಹುದಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ಎಲ್ಲಾ ಸೇವೆಗಳು ಕಾರ್ಮಿಕರಿಗೆ ತಮ್ಮ ಅಬ್ಶಿರ್ ಪೋರ್ಟಲ್ ಮೂಲಕ ಲಭ್ಯವಿದ್ದು, ಈ ಹೊಸ ಕಾರ್ಮಿಕ ನೀತಿಯ ಮೂಲಕ ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.
ಯಾಕೆಂದರೆ, ಈ ಹಿಂದೆ ಸೌದಿಯಲ್ಲಿ ಉದ್ಯೋಗದಲ್ಲಿರುವ ವಿದೇಶಿ ಕಾರ್ಮಿಕರು ಇದುವರೆಗೂ ತಮ್ಮ ಸ್ಪೋನ್ಸರ್ ನ ಅನುಮತಿಯಿಲ್ಲದೇ ಸೌದಿ ಅರೇಬಿಯಾವನ್ನು ತೊರೆಯುವಂತಿರಲಿಲ್ಲ ಹಾಗೂ ಉದ್ಯೋಗದಾತನು ಎಷ್ಟೇ ಕಿರುಕುಳ ನೀಡಿದರೂ ಅಥವಾ ವೇತನ ಸರಿಯಾಗಿ ನೀಡದಿದ್ದರೂ ಕೂಡ ತಮ್ಮ ಉದ್ಯೋಗದಾತನನ್ನು ಬಿಟ್ಟು ಹೋಗುವಂತಿರಲಿಲ್ಲ. ಆದ್ದರಿಂದ ಈ ಹೊಸ ನೀತಿ ಸೌದಿಯ ವಿದೇಶಿ ಕಾರ್ಮಿಕರ ಮುಖದಲ್ಲಿ ಮಂದಹಾಸವನ್ನು ಬೀರುವಂತೆ ಮಾಡಿದೆ.