ಕಾರ್ಕಳ: ಹಿಂದೂ ಜಾಗರಣ ವೇದಿಕೆ ಮತ್ತು ಭಜರಂಗ ದಳದ ಕಾರ್ಯಕರ್ತರ ನಡುವೆ ಮಾರಾಮಾರಿ
ಕಾರ್ಕಳ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಮತ್ತು ಭಜರಂಗ ದಳದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಕಾರ್ಕಳದಲ್ಲಿ ನಡೆದಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ನಿಟ್ಟೆ ಗ್ರಾಮದ ಅನಿಲ್ ಪೂಜಾರಿ ಹಲ್ಲೆಗೊಳಗಾದ ವ್ಯಕ್ತಿ. ಭಜರಂಗ ದಳದ ಪ್ರಮುಖರಾದ ನಿಟ್ಟೆ ಗ್ರಾಮದ ಸುನಿಲ್, ಸುಧೀರ್, ಶರತ್, ಪ್ರಸಾದ್, ಜಗದೀಶ್ ಎಂಬವರು ಹಲ್ಲೆ ಮಾಡಿದವರು.
ಮಾ. 14 ರ ತಡರಾತ್ರಿ ಅನಿಲ್ ಪೂಜಾರಿ ಅವರ ಮನೆಗೆ ನುಗ್ಗಿ ಭಜರಂಗದಳದವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಅನಿಲ್ ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಾಯವಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ, ಅನಿಲ್ ಅವರಿಗೆ ಹಲ್ಲೆ ನಡೆಸುವ ಸಂದರ್ಭ ಅಡ್ಡ ಬಂದ ಅನಿಲ್ ಅವರ ತಾಯಿಗೂ ಗಾಯವಾಗಿದ್ದು, ಅವರನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಅನಿಲ್ ಹಾಗೂ ಹಲ್ಲೆ ನಡೆಸಿದ ತಂಡದ ನಡುವೆ ತಕರಾರಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಅನಿಲ್ ಅವರು ಭಜರಂಗದಳ ಬಿಟ್ಟು ಜಾಗರಣೆ ವೇದಿಕೆಗೆ ಸೇರ್ಪಡೆಯಾಗಿರುವುದೇ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಸಂಬಂಧ ಅನಿಲ್ ಮೇಲೆ ಈ ಹಿಂದೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎರಡು ದಿನಗಳ ಹಿಂದೆ ಆನೆಕೆರೆಯಲ್ಲಿ ಹಿಂದೂ ಯುವತಿಯೊಂದಿಗಿದ್ದ ಅನ್ಯಕೋಮಿನ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ವಿಚಾರವಾಗಿ ಸಂಘಟನೆಗಳ ಮಧ್ಯೆ ವೈಷಮ್ಯ ಉಂಟಾಗಿತ್ತು. ಯುವಕನನ್ನು ಹಿಡಿದು ನಾವು ಪೊಲೀಸ್ರ ವಶಕ್ಕೆ ನೀಡಿದ್ದು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರೆ, ಭಜರಂಗದಳದವರು ಅದು ನಮ್ಮಿಂದಾದ ಕಾರ್ಯವೆಂದು ಹರಿಯಬಿಟ್ಟಿದ್ದಾರೆ. ಇದು ಇತ್ತಂಡಗಳಿಗೆ ಪ್ರತಿಷ್ಠೆಯ ವಿಚಾರವಾಗಿದ್ದು, ಹಲ್ಲೆಗೆ ಮೂಲ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.