ಪೌರಕಾರ್ಮಿಕರಿಗೆ ಹಲ್ಲೆ: ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆಯಾಗಲಿ- ಮಹೇಶ್ ಠಾಕೂರ್
ಉಡುಪಿ : (ಉಡುಪಿ ಟೈಮ್ಸ್ ವರದಿ) ನಗರದ ಸಿಟಿ ಬಸ್ಸು ನಿಲ್ದಾಣ ಬಳಿ ಪೌರಕಾರ್ಮಿಕರ ಮೇಲೆ ಅಂಗಡಿ ಮಾಲೀಕ ಹಲ್ಲೆ ಮಾಡಿದ್ದು ನಿಜಕ್ಕೂ ಖಂಡನೀಯ. ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಉಡುಪಿ ನಗರ ಬಿಜೆಪಿ ಇದನ್ನು ಖಂಡಿಸುತ್ತದೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೌರಕಾರ್ಮಿಕರು ಜವಾಬ್ದಾರಿಯಿಂದ ನಗರದ ಸ್ವಚ್ಛತೆ ಕಾಪಾಡುವಲ್ಲಿ ಕೆಲಸ ಮಾಡುತ್ತಿದ್ದು, ಅವರ ಕೆಲಸಕ್ಕೆ ಸಹಕರಿಸಬೇಕಾದದ್ದು ನಮ್ಮ ಕರ್ತವ್ಯ. ದುರಾದೃಷ್ಟವಶಾತ್ ಅಂಗಡಿ ಮಾಲೀಕರ ಸಹೋದರರು ಪೌರಕಾರ್ಮಿಕರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ನಿಜಕ್ಕೂ ಖಂಡನೀಯ. ಘಟನೆ ನಡೆದ ತಕ್ಷಣ ಆರೋಪಿಗಳನ್ನು ಪೊಲೀಸರ ಬಂಧಿಸಿದ್ದಾರೆ, ಕಾನೂನು ಅದರದೇ ಆದ ಕೆಲಸ ಮಾಡುತ್ತಿದೆ, ಘಟನೆ ಬಗ್ಗೆ ಯಾರೂ ಕೂಡ ವೈಭವೀಕರಿಸುವ ಅಗತ್ಯವಿಲ್ಲ. ಪೊಲೀಸರ ಸಕಾಲಿಕ ಕ್ರಮವವನ್ನು ನಗರ ಬಿಜೆಪಿ ಪ್ರಶಂಸಿಸುತ್ತದೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಿರಲಿ ಎಂದು ಮಹೇಶ್ ಠಾಕೂರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.