ಪೌರ ಕಾರ್ಮಿಕರ ಮೇಲೆ ಹಲ್ಲೆ: ಸೂಕ್ತ ಕಾನೂನು ಕ್ರಮಕ್ಕಾಗಿ ಬ್ಲಾಕ್ ಕಾಂಗ್ರೆಸ್ ಒತ್ತಾಯ

ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಸಿಟಿ ಬಸ್ ನಿಲ್ದಾಣದ ಸಮೀಪ ಇರುವ ಆಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡಣೆಯ ವಿಚಾರವಾಗಿ ತಗಾದೆ ತೆಗೆದು ನಗರಸಭೆಯ ಪೌರ ಕಾರ್ಮಿಕರಾದ ಬಾಗಲ್‌ಕೋಟೆ ನಿವಾಸಿ ಪ್ರಸ್ತುತ ನಿಟ್ಟೂರಿನ ನಿವಾಸಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಸಂಜು ಮಾದರ್ (26) ಎಂಬವರ ಮೇಲೆ ದೈಹಿಕ ಹಲ್ಲೆ ಮಾಡಲಾಗಿದೆ.
ಪೌರ ಕಾರ್ಮಿಕರು ನಗರದ ಸ್ವಚ್ಚತೆಯ ರಾಯಭಾರಿಗಳು. ಪೌರ ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಆಘಾತಕಾರಿ ಮತ್ತು ಈ ಘಟನೆಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡಿಸಿದೆ. ಪೌರ ಕಾರ್ಮಿಕರಿಗೆ ಸಂಪೂರ್ಣ ಭದ್ರತೆ ನೀಡುವುದು ಸ್ಥಳಿಯಾಡಳಿತದ ಜವಾಬ್ದಾರಿ. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಈ ಘಟನೆಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ, ಪ್ರಚೋದನೆ, ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಮುಂತಾದ ಕ್ರಿಯೆಗಳಿಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಮಾಜಿ ನಗರಸಭಾ ಸದಸ್ಯರಾದ ನಾರಾಯಣ ಕುಂದರ್, ಗಣೇಶ್ ದೊಡ್ಡಣಗುಡ್ಡೆ ಮೊದಲಾದವರು ಪತ್ರಿಕಾ ಪ್ರಕಟಣೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.