ಕೃಷಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಬೈಂದೂರಿನಿಂದ ಉಡುಪಿಯವರೆಗೆ ಪಾದಯಾತ್ರೆ
ಉಡುಪಿ: ಕೇಂದ್ರ ಕೃಷಿ ಕಾನೂನುಗಳನ್ನು ಬೆಂಬಲಿಸಿ ಜಿಲ್ಲಾ ಬಿಜೆಪಿ ವತಿಯಿಂದ ಏಪ್ರಿಲ್ ಎರಡನೇ ವಾರದಲ್ಲಿ ರ್ಯಾಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ದುರುದ್ದೇಶಪೂರಿತ ಮತ್ತು ತಪ್ಪು ಮಾಹಿತಿ ನೀಡುವ ಅಭಿಯಾನದಲ್ಲಿ ತೊಡಗಿದೆ. ಆದ್ದರಿಂದ, ಈ ಅಭಿಯಾನದ ವಿರುದ್ಧ ಮತ್ತು ಕೃಷಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು, ಬೈಂದೂರಿನಿಂದ ಉಡುಪಿಯವರೆಗೆ ಪಾದಯಾತ್ರೆಯನ್ನು ಆಯೋಜಿಸುತ್ತದೆ” ಎಂದು ಹೇಳಿದರು.
30 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ 26 ಮತ್ತು 85 ತಾಲ್ಲೂಕು ಪಂಚಾಯತ್ ಸ್ಥಾನಗಳಲ್ಲಿ 70 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಬಿಜೆಪಿ ಹೊಂದಿದೆ” ಈ ನಿಟ್ಟಿನಲ್ಲಿ ಮಾರ್ಚ್ 20 ರಿಂದ 32 ಕೇಂದ್ರಗಳಲ್ಲಿ, ಗ್ರಾಮಗಳಲ್ಲಿ ತಂಗಲು ಜಿಲ್ಲಾ ಬಿಜೆಪಿ ನಿರ್ಧರಿಸಿದೆ. ಈ ಕಾರ್ಯಕ್ರಮದಡಿ ಐದರಿಂದ ಆರು ಜನರ ತಂಡ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಉಳಿಯಲಿದೆ. ಬಳಿಕ ಸಂಜೆ 5 ಗಂಟೆಗೆ ಸಭೆ ನಡೆಯಲಿದ್ದು, ಪಕ್ಷದ ಸಕ್ರಿಯ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮತ್ತು ಇತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಸದಸ್ಯೆ ಶಿಲ್ಪಾ ಸುವರ್ಣ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.