ಮುಂದಿನ ಬಾರಿಯೂ ಸಿದ್ದರಾಮಯ್ಯ ವಿಪಕ್ಷದಲ್ಲೇ- ಹಾಗೆ ಮಾಡದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ
ಬೆಂಗಳೂರು: “ಸಂಕಷ್ಟ ಸನ್ನಿವೇಶದಲ್ಲಿ ಬಜೆಟ್ ಮಂಡನೆ ಮಾಡಿದ್ದೇನೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಸರ್ವವ್ಯಾಪಿ ಬಜೆಟ್ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಸಿಎಂ, “ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕಿಲ್ಲ, ಯಾರಿಗೂ ಹೊರೆಯಾಗದ ಬಜೆಟ್ ಇದಾಗಿದ್ದು, ಇತಿಹಾಸದಲ್ಲೇ ಇದು ಮೊದಲು” ಎಂದು ತಮ್ಮ ಬಜೆಟ್ ನ್ನು ಸಮರ್ಥಿಸಿಕೊಂಡಿದ್ದಾರೆ.
“8 ನೇ ಬಾರಿಗೆ ಬಜೆಟ್ ಮಂಡನೆ, ಕಳೆದ ವರ್ಷದ ಆಯವ್ಯಯದ ಗಾತ್ರಕ್ಕಿಂತಲೂ 8,314 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ವಿತ್ತೀಯ ಶಿಸ್ತನ್ನು ಕಾಪಾಡಿ ಕೊಳ್ಳುವುದರ ಜೊತೆಗೆ, ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ತುಸು ಸುಧಾರಿಸಿದ್ದರಿಂದ ಈ ರೀತಿಯ ಬಜೆಟ್ ಮಂಡನೆ ಸಾಧ್ಯವಾಗಿದೆ. ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿರುವುದು ಸಮಾಧಾನ ತಂದಿದೆ, ಈ ದೃಷ್ಟಿಯಿಂದ ಇದು ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಆಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದೇ ವೇಳೆ ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಸದಸ್ಯರು ವಿಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ, ಯಡಿಯೂರಪ್ಪ ಅವರಿಗೆ ಬಜೆಟ್ ಮಂಡಿಸುವ ನೈತಿಕತೆ ಇಲ್ಲ ಎಂದು ಪ್ರತಿಭಟಿಸಿ ಸಭಾತ್ಯಾಗ ಮಾಡಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, “ಕಾಂಗ್ರೆಸ್ ನವರ ನೈತೈಕತೆ ಅವರ ತಲೆ, ನಾಳೆ ಅವರ ನೈತಿಕತೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧವೂ ಗುಡುಗಿದ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಮುಂದಿನ ಬಾರಿಯೂ ವಿಪಕ್ಷದಲ್ಲಿರುತ್ತಾರೆ, ಅವರನ್ನು ವಿಪಕ್ಷದಲ್ಲೇ ಕೂರಿಸದಿದ್ದರೆ ನಾನ ಯಡಿಯೂರಪ್ಪನೇ ಅಲ್ಲ, ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 135 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಸವಾಲು ಹಾಕಿದ್ದಾರೆ.