ಹೊಸ ತೆರಿಗೆ ಇಲ್ಲ, ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಕಡಿತ ಇಲ್ಲ: ಸಿಎಂ

ಬೆಂಗಳೂರು: ಕಳೆದ ವರ್ಷವಿಡೀ ರಾಜ್ಯದ ಜನತೆ ಕೋವಿಡ್-19 ಸಂಕಷ್ಟದಿಂದ ಆರ್ಥಿಕವಾಗಿ ಬಹಳ ನೊಂದು ಬೆಂದು ಹೋಗಿದ್ದಾರೆ, ಹೀಗಾಗಿ ಈ ವರ್ಷ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಕೋವಿಡ್ ನಿಂದ ಸಂಕಷ್ಟಕ್ಕೀಡಾಗಿರುವ ಜನತೆಗೆ ಮತ್ತಷ್ಟು ತೆರಿಗೆ ಹೊರೆ ವಿಧಿಸುವುದಿಲ್ಲ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಇಳಿಸುವುದಿಲ್ಲ. ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ಹೀಗಾಗಿ ಇಂಧನದ ಮೇಲೆ ಹೊಸ ತೆರಿಗೆ ವಿಧಿಸುವುದಿಲ್ಲ, ಈಗಿರುವ ಮಾರಾಟ ತೆರಿಗೆ ಕಡಿತವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಆರ್ಥಿಕ ಸಾಲಿನಲ್ಲಿ ನಿರೀಕ್ಷೆ ಮಾಡಲಾಗಿದ್ದ 28 ಸಾವಿರದ 591 ಕೋಟಿ ತೆರಿಗೆಗೆ ಪ್ರತಿಯಾಗಿ 20 ಸಾವಿರದ 053 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿದೆ. 2021-22ನೇ ಸಾಲಿಗೆ 24 ಸಾವಿರದ 273 ಕೋಟಿ ತೆರಿಗೆ ಪಾಲು ನೀಡುವುದಾಗಿ ಕೇಂದ್ರ ತಿಳಿಸಿದೆ. ರಾಜ್ಯದ ಜಿಎಸ್ ಟಿ ಸಂಗ್ರಹ ಇಳಿಕೆಯಾಗಿದೆ. ಇದನ್ನು ಕೇಂದ್ರ ಸರ್ಕಾರ ನೀಡಬೇಕಿದೆ. ಆದರೆ ಕೇಂದ್ರ ಸರ್ಕಾರ ಸಾಲ ಪಡೆದು ಹಣ ನೀಡುವುದಾಗಿ ಹೇಳಿದೆ. ಈ ಸಾಲ ಮರುಪಾವತಿಯನ್ನು ಜಿಎಸ್ ಟಿ ಮರುಪಾವತಿ ಉಪಕ್ರಮದಲ್ಲಿ ನೀಡುವುದಾಗಿ ಹೇಳಿದೆ ಎಂದರು. 

ಅವರು ಇಂದು ವಿಧಾನ ಸೌಧದಲ್ಲಿ 2021-22ನೇ ಆರ್ಥಿಕ ಸಾಲಿನ ಬಜೆಟ್ ಮಂಡಿಸಿ, ಯಾವುದೇ ಹೊಸ ತೆರಿಗೆ ವಿಧಿಸದೆ, ಈಗಿರುವ ತೆರಿಗೆಯನ್ನು ಕಡಿತ ಮಾಡದೇ ಸಮತೋಲನದ ಬಜೆಟ್ ಮಂಡಿಸುವ ಪ್ರಯತ್ನ ಮಾಡಿದರು. 45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್ ಖರೀದಿಗೆ ಮುದ್ರಾಂಕ ಶುಲ್ಕ ಕೂಡ ಇಲ್ಲ ಎಂದು ತಿಳಿಸಿದರು. ಇದರಿಂದ ಮಧ್ಯಮ ವರ್ಗದ ನಗರ ಪ್ರದೇಶದ ನಿವಾಸಿಗಳಿಗೆ ಪ್ರಯೋಜನವಾಗಲಿದೆ. ನೋಂದಣಿ, ಮುದ್ರಾಂಕ ಶುಲ್ಕ ಶೇ.5ರಿಂದ ಶೇಕಡಾ 3ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!