ಬಾರ್ಕೂರು: ಆಕ್ರಮಿಸಿರುವ ಬಸದಿಗಳ ತಕ್ಷಣವೇ ತೆರವುಗೊಳಿಸಿ – ಜೈನಸಮಾಜ ಮನವಿ

ಉಡುಪಿ: ಬಾರ್ಕೂರಿನಲ್ಲಿ ಜನರು ಆಕ್ರಮಿಸಿರುವ ಪುರಾತನವಾದ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿ ಮತ್ತು ಶ್ರೀಆದಿನಾಥ ಸ್ವಾಮಿ ಬಸದಿಗಳ ಪ್ರದೇಶವನ್ನು ತಕ್ಷಣವೇ ತೆರವುಗೊಳಿಸಿ ತಂತಿಬೇಲಿಯನ್ನು ನಿರ್ಮಿಸಿ ತಾತ್ಕಾಲಿಕ ರಕ್ಷಣೆಯನ್ನು ಒದಗಿಸುವಂತೆ ಹಾಗೂ ಆರ್ ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿತರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜೈನಸಮಾಜ ಹಾಗೂ ಜೈನ್ ಮಿಲನ್‍ಗಳ ವತಿಯಿಂದ  ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಮನವಿಯಲ್ಲಿ, ತುಳುನಾಡಿನ ಪುರಾತನ ರಾಜಧಾನಿ ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ಜೈನ ಅರಸರ ಕಾಲದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಬಸದಿಗಳ, ದೇವಸ್ಥಾನಗಳ ನಿರ್ಮಾಣವಾಗಿದ್ದು ಇದು ಶಿಲಾಶಾಸನಗಳ ಮೂಲಕ ತಿಳಿದುಬರುತ್ತದೆ. ಇವುಗಳಲ್ಲಿ ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ ಹೊಸಾಳ ಗ್ರಾಮದ ವ್ಯಾಪ್ತಿಯ ಸಾವಿರದ ಇನ್ನೂರು ವರ್ಷಗಳಷ್ಟು ಪುರಾತನವಾದ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿ ಮತ್ತು ಶ್ರೀ ಆದಿನಾಥ ಸ್ವಾಮಿ ಬಸದಿ ಗಳು ಸೇರಿವೆ. ಆದರೆ ಈ ಪ್ರದೇಶವನ್ನು ಹಲವಾರು ಜನರು ಅತಿಕ್ರಮಿಸಿಕೊಂಡಿದ್ದು, ಬಸದಿಯ ಪ್ರದೇಶವನ್ನು ಗೊಬ್ಬರ ಹಾಕಲು , ಟಾಯ್ಲೆಟ್ ಗುಂಡಿಗಳನ್ನು ಮಾಡಿಕೊಂಡು ಕಸವನ್ನು ಹಾಕಲು ಉಪಯೋಗಿಸಿಕೊಳ್ಳುತ್ತಿದ್ದಾರೆ.  

ಆಕ್ರಮಿತ ಪ್ರದೇಶವನ್ನು ಈಗಾಗಲೇ ಬಾರ್ಕೂರಿನ ಜೈನ ಸಮಾಜದ ಮನವಿಯಂತೆ ತಹಶೀಲ್ದಾರರು ಸರ್ವೇಯನ್ನು ನಡೆಸಿದ್ದು ಒತ್ತುವರಿ ಮಾಡಿರುವ ಬಗ್ಗೆ ಸರ್ವೆ ವರದಿಯಲ್ಲಿ ಕಂಡುಬಂದಿದೆ.  ಅತಿಕ್ರಮಣದಾರರಿಗೆ ಅತಿಕ್ರಮಣ ತೆರವು ಗೊಳಿಸುವಂತೆ ನೋಟೀಸನ್ನೂ ನೀಡಲಾಗಿದೆ. ಆದರೆ ಇದುವರೆಗೆ ಅತಿಕ್ರಮಣ ತೆರವು ಗೊಳಿಸಿರುವುದಿಲ್ಲ.  ಜೈನ ಸಮಾಜವು ಈ ಬಸದಿಗಳ ರಕ್ಷಣೆಗೆ ಕಾರ್ಯಪ್ರವೃತ್ತರಾಗಿದ್ದು ಬಾರಕೂರಿನ ಕಾರ್ಯಕರ್ತ ಶಂಕರ ಶಾಂತಿಯವರು ದಾಖಲೆಗಳನ್ನು ಒದಗಿಸಲು ಸಹಕರಿಸಿದ್ದರು. ಆದ್ದರಿಂದ ಆರ್ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆದ್ದರಿಂದ ತಕ್ಷಣ ಅತಿಕ್ರಮಣವನ್ನು ತೆರವು ಗೊಳಿಸಬೇಕು ಹಾಗೂ ಆರ್ ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಈ ಸಂದರ್ಬ ಉಡುಪಿ ಕಾರ್ಕಳ ಬಜಗೋಳಿ ಮೂಡಬಿದರೆ ಪುತ್ತೂರು ಪಡಂಗಡಿ ರಾಣಿ ಅಬ್ಬಕ್ಕ ಮಹಿಳಾ ಸಂಘ ಹಾಗೂ ಜೈನ ಸಮಾಜದ ಜೈನ ಬಾಂಧವರು ಜೊತೆಗಿದ್ದರು. ಬಳಿಕ ಸರಕಾರಿ ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಆರ್ ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಆರೋಗ್ಯ ವಿಚಾರಿಸಿ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ  ಹೆಚ್ಚುವರಿ ಪೊಲೀಸ್ ಅಧಿಕ್ಷಕರಿಗೆ ಮನವಿ ಮಾಡಲಾಯಿತು.

ಅವಿಭಜಿತ ಉಡುಪಿ ಹಾಗೂ ದ.ಕ ಜಿಲ್ಲಾ ಜೈನ ಭಾಂದವರು ಉಡುಪಿ, ಮೂಡುಬಿದಿರೆ, ಕಾರ್ಕಳ ಬಜಗೋಳಿ ಜೈನ್ ಮಿಲನ್, ರಾಣಿ ಅಬ್ಬಕ್ಕ ಮಹಿಳಾ ಸಂಘಪಾಶ್ರ್ವ ಪದ್ಮ ಪಡ0ಗಡಿ, ಪುತ್ತೂರು ಜೈನ ಭಾಂದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!