ಗಂಗೊಳ್ಳಿ: ತ್ರಾಸಿ ಗ್ರಾಮ ಪಂಚಾಯತ್’ಗೆ ನುಗ್ಗಿ ಕಳ್ಳತನ
ಗಂಗೊಳ್ಳಿ: ತ್ರಾಸಿ ಗ್ರಾಮ ಪಂಚಾಯತ್ನ ಪಂಚಾಯತ್ ನಲ್ಲಿ ಸಂಗ್ರಹಿಸಿದ್ದ ತೆರಿಗೆ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಮಾ.2 ರಂದು ನಡೆದಿದೆ. ಗ್ರಾಮ ಪಂಚಾಯತ್ನಲ್ಲಿ ಪ್ರತಿದಿನ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಜೆ ಕ್ರೋಡೀಕರಿಸಿ ಮರು ದಿನ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದರು.
ಅದರಂತೆ ಮಾ.2 ರಂದು ಸಂಗ್ರಹಿಸಿದ ವಿವಿಧ ರೀತಿಯ ತೆರಿಗೆ ಹಣ ರೂ. 35,833 ನ್ನು ತೆರಿಗೆ ಮೊತ್ತವನ್ನು ಸಂಗ್ರಹಿಸಿದ ಸಿಬ್ಬಂದಿಯವರು ಕ್ರೂಢೀಕರಿಸಿ ಕಛೇರಿಯ ಅಲ್ಮೇರಾ ಮತ್ತು ಕಪಾಟಿನಲ್ಲಿ ಇರಿಸಿ ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಮರುದಿನ ಅಂದರೆ ಮಾ.3 ರಂದು, ಬೆಳಿಗ್ಗೆ ಕಛೇರಿಯ ಸಿಬ್ಬಂದಿ ಸಂದೀಪ ರವರು ಬಾಗಿಲು ತೆರೆಯಲು ಬಂದಾಗ ಕಚೇರಿಯ ಒಳಗಡೆ ಕಡತಗಳು ಹರಡಿ ಬಿದ್ದಿರುವುದನ್ನು ನೋಡಿ, ತ್ರಾಸಿ ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶೋಭಾ ಎಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅಧಿಕಾರಿ ಹಾಗೂ ಇತರ ಸಿಬ್ಬಂದಿಗಳು ಬಂದು ಪರಿಶೀಲಿಸಿ ನೋಡಿದಾಗ ಕಳ್ಳತನ ವಾಗಿರುವುದು ತಿಳಿದು ಬಂದಿದೆ. ಅಧ್ಯಕ್ಷರ ಕೊಠಡಿಯ ಮೀಟಿಂಗ್ ಹಾಲ್ನಲ್ಲಿರುವ ಕಿಟಕಿಯ ಕಬ್ಬಿಣದ ಸರಳನ್ನು ಬಗ್ಗಿಸಿ ಒಳ ನುಗ್ಗಿದ ಕಳ್ಳರು ಕಛೇರಿಯ ಕಿಟಕಿ, ಅಲ್ಮೇರಾ, ಕಪಾಟು, ಡ್ರಾವರ್ಗಳನ್ನು ಜಖಂಗೊಳಿಸಿದ್ದೂ ಅಲ್ಲದೆ, ಕಚೇರಿಯ ಅಲ್ಮೇರಾ ಹಾಗೂ ಕಪಾಟಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿವಿಧ ರೀತಿಯ ತೆರಿಗೆ 35,833 ರೂ. ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.